Thursday, 9 July 2020

/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನನ್ನ ಮೇಲೆ ಹಾಸ್ಟೆಲ್ ಮತ್ತು ಪಿಜಿ ಪ್ರಭಾವ ಇಲ್ಲ ಅಂದ್ರೆ ತಪ್ಪಾಗುತ್ತೆ.ಆ ಜಾದುಗಾತಿ ಏನೋ ಪಲ್ಯದನ್ನ ಕಲ್ಸಿ ...ಬಿರ್ಯಾನಿ ಇದು ಅಂದ್ರು, ಸರಿ ಚೆನ್ನಾಗಿದೆ ಅಂತ ತಿನ್ನೋವಷ್ಟು ಹೊರಗಿನ ಆಹಾರ ನನ್ನ ಬಾಯಿ ಕೆಡ್ಸಿದೆ.ಪಿಜಿಯಲ್ಲಿ ಅನ್ನಕ್ಕೆ, ಆ ಸಪ್ಪೆ ದಾಲ್ ಕಲ್ಸಿ ಹೊಟ್ಟೆಗೆ ಇಳ್ಸೋ ಜವಬ್ದಾರಿನ...ಅಮ್ಮ, ಅವಳು ಹಾಕಿರೋ ಮಾವಿನಕಾಯಿ ಮಿಡಿ ಉಪ್ಪಿನಕಾಯಿಗೆ ಹಾಗೂ ಶೇಂಗಾ ಚಟ್ಣಿಪುಡಿಗೆ ವಹಿಸಿರ್ತಾಳೆ.ಆ ಒಣಗೋಗಿರೋ ಚಪಾತಿ, ಬೇರೆ ತರಕಾರಿನೇ ಕಂಡಿಲ್ದೆ ಇರೋ ಆಲೂ ಕರಿ  ನೋಡಿ ಊಟವೇ ಬೇಡೆನಿಸಿದಾಗ...ಈ ಪುಣ್ಯಾತ್ಗಿತ್ತಿ ಮಾಡಿ ಕಳ್ಸಿರೋ ಪುಳಿಯೋಗರೆ ಗೊಜ್ಜು ಮೈಲಿ ದೂರವಿರೋ ಮನೆಗೆ ಮತ್ತು ಮನೆಯಲ್ಲಿರೋ ಅವ್ಳತ್ರನೇ ಹೋದಂತೆ ಪುಳಕಿತಗೊಳ್ಸೋದಂತು ನಿಜ. .

ತಲೆನೋವು ಬಂದು ಅಲ್ಲೇ ಹೋಟೇಲ್ನಲ್ಲಿ ಬ್ರೂ ಹಾಕಿರೋ ಇನ್ಸಟಂಟ್ ಕಾಫಿನೋ ಅಥವಾ ಕಾಫಿಯ ಹದವೇ ತಿಳಿಯದವನೊಬ್ಬ ಡಿಕಾಕ್ಶನ್ಗೆ ಹಾಲಂತ ನೀರನ್ನು ಕದಡಿ ಕೊಟ್ಟದನ್ನ ಕುಡಿಯುವ ಮನಸ್ಸು, " ಅಮ್ಮಾ....ಒಂದ್ ಸ್ಟ್ರಾಂಗ್ ಫಿಲ್ಟರ್ ಕಾಪಿ" ಅಂತ ಚೀರಾಡ್ತಿರತ್ತೆ. .

ಮನೆಯಿಂದ ಹೊರಡುವಾಗ ಅವಲಕ್ಕಿ ಚೂಡ, ಮಂಡಕ್ಕಿ ಒಗ್ಗರಣೆ ಅಂತ ಅಮ್ಮ ತುಂಬಿಕೊಡುತ್ತಿರುವಾಗ..ಹೊತ್ತ್ಕೊಂಡು ಬಸ್ಸಿನಲ್ಲಿ ಹೋಗೋದಕ್ಕೆ ಆಗಲ್ಲಾ ಅಂತ ಸ್ವಲ್ಪ ಜೋರಾಗೇ ಹೇಳಿದರು ಹಟಬಿಡದೆ ಇನ್ನೂ ಎರಡು ಹೆಚ್ಚಿಗೆ ತಿಂಡಿ ತುಂಬಿಸಿ..."ನೋಡು ಬೇಕಿದ್ರೆ ಆಫೀಸ್ಸು ಮುಗ್ಸಿಬಂದು ಸಂಜೆ ಒಂದಿಷ್ಟು ಬಾಯಾಡ್ಸಿದ ಮೇಲೆ ನನ್ನ ನೆನಪಿಸಿಕೊಳ್ಳುತ್ತೀಯ with a smile on your face"  ಅಂತ ಹೇಳ್ಬಿಡ್ತಾಳೆ.ಅದು ನಿಜವೇ ಅನ್ಸೋದು ಆ ಮಾಯನಗರಿಯ ಜನಜಂಗುಳಿಯಲ್ಲಿ ಬಳಲಿ, ಆಫೀಸ್ ಕೆಲಸ ಎಂಬ ಬಿಸಿ ಎಣ್ಣೆಯಲ್ಲಿ ಕರಿದು ಕರಿದು ಸೀದಂತಾದ ಜೀವ ನಿರ್ಲಿಪ್ತ ಸಂಜೆಗಳಲ್ಲಿ ಈ ತಿಂಡಿಗಳ ತಡುಕಾಡಿ ಒಂದ್ ಹಿಡಿ ಹೊಟ್ಟೆಗಿಳಿಸಿ ಅಮ್ಮನ ಆ ಮಾತು ನೆನದಾಗ ಮುಗುಳ್ನಗೆಯೊಂದು ನಗರದ ಸಿಗ್ನಲ್ಗಳಿಗೂ ಕಾಯದೆ ಮಿಂಚಿ ಮರೆಯಾದಾಗ...... .

ಇಷ್ಟಿದ್ದರೂ ಯಾವಾಗಲೋ ಮನೆಗೆ ಬಂದಾಗ ಏನ್ ಮಾಡಿಕೊಡ್ಲೆ ಮಗು ಅಂತ ಕೇಳಿದಾಗ...ನಾನು ಹಲ್ಲು ಗಿಂಜಿಕೊಂಡು ಹೇಳೋದು ಅದೊಂದನ್ನೇ.." ಅನ್ನ ತಿಳೀ ಸಾರು".ಎರಡು ಕೆಂಪು ಮೆಣಸು ಮುರಿದು, ಒಂದಿಷ್ಟು ಇಂಗು ಒಗ್ಗರಿಸಿ ...ಅವಳ ಮಾಡೋ ಸಾರಿನ ಘಮದಲ್ಲೇ ನೆಮ್ಮದಿ ಕಾಣೋ ಈ ಜೀವ...
ಅದನ್ನೇ ಅಮೃತವೆಂಬಂತೆ ಮತ್ತೆ ಮತ್ತೆ ಕುಡಿದು ಮುಗಿಸುವ ನನ್ನ ನೋಡಿ ನೆಮ್ಮದಿ ಕಾಣುತ್ತೆ ಆ ಜೀವ... .

ಕಾಣದೂರಲ್ಲಿ ನನ್ನ ಮಗು ಅದೇನು ತಿಂದಿದ್ಯೋ, ಹಸ್ಕೊಂಡಿದ್ಯೋ... ಅನ್ನೋ ಯೋಚನೆಯಲ್ಲಿ ತಾನು ತಿನ್ನೋ ತುತ್ತನ್ನೂ ಕಷ್ಟಪಟ್ಟು ಅರಗಿಸ್ಕೊಳ್ಳೋ ಆ ಜೀವಕ್ಕೆ ಒಂದು ಸಲಾಂ......


/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನ...