Wednesday, 21 March 2018

ನೆನಪು



ನೆನಪು, ಮನಸ್ಸಿನಲ್ಲಿ ಪರಿಪರಿಯಾಗಿ ಹೆಣೆದ
ವ್ಯಕ್ತಿ, ವಸ್ತು ಮತ್ತು ಪ್ರಸಂಗಗಳ ಬಣ್ಣ ಬಣ್ಣದ ಬಿಂಬ.ಸುಮ್ಮನೆ ಕೂತಾಗೊಮ್ಮೆ, ಹಳೆಯದನ್ನೆಲ್ಲಾ ನೆನೆದರೆ ತುಟಿಯಂಚಿನಲ್ಲೊಂದು ನಗು ಅಥವಾ ಕಣ್ಣಂಚಿನ ಅಶ್ರು ಖಚಿತ.ನೆನಪುಗಳ ಬುತ್ತಿ ಬಿಚ್ಚುತ್ತಾ ಹೋದಂತೆ ಮನಸ್ಸಿಗೆ ಮತ್ತಷ್ಟು, ಮಗದಷ್ಟು ನೆನೆಯುವ ಆಸೆ, ಥೇಟ್ ಆಟಿಕೆ ಸಿಗದೆ ರಚ್ಚೆ ಹಿಡಿದ ಮಗುವಿನಂತೆ.ವಿಪರ್ಯಾಸವೆಂದರೆ ಕಾಲಗಳೆದಂತೆ, ನೆನಪುಗಳು ನಮ್ಮಿಂದ ಮಾಸುತ್ತಾ ಹೋಗುತ್ತದೆ.ಆದರೆ ಎಲ್ಲರ ಜೀವನದಲ್ಲೂ ಅಳಿಸಲಾಗದ ಒಂದಿಷ್ಟು ನೆನಪುಗಳು ಮನೆ ಮಾಡಿರುತ್ತವೆ.ಕೆಲವೊಂದು ವಸ್ತು-ವ್ಯಕ್ತಿಗಳು ನಮ್ಮೊಂದಿಗೆ ಭೌತಿಕವಾಗಿ ನೆಲೆಸಿರದಿದ್ದರು, ನಮ್ಮ ಮನದ ಮೂಲೆಯಲ್ಲೆಲ್ಲೋ ಶಾಶ್ವತವಾಗಿ ಟಿಕಾಣಿ ಹೂಡಿರುತ್ತಾರೆ.ನೀವು ಎಂದಾದರು ನಿಮ್ಮ ತುಟಿಯಂಚಿನಲ್ಲಿ ನಗು ಮೂಡಿಸಿದ, ನಿಮ್ಮ ಬೇಜಾರನ್ನು ಕ್ಷಣಾರ್ಧದಲ್ಲಿ ದೂರ ಮಾಡಿದ, ನಿಮ್ಮ ನೆನಪಿನಲ್ಲಿ ಜೀವಂತವಾಗಿರುವ ವ್ಯಕ್ತಿಗೆ, ಅಂತರಾಳದಿಂದೊಮ್ಮೆ ಮನಸಿನಲ್ಲೇ ಧನ್ಯವಾದ ಸಲ್ಲಿಸಿದ್ದೀರಾ....?????
Dedicated to all the people who are alive in my memories.......💓

Tuesday, 13 March 2018

ಒಡೆದ ಗಾಜು

ಒಡೆದ ಗಾಜು

        ಕರೆಂಟ್ ಹೋಗಿತ್ತು ಕಾರ್ಗತ್ತಲು, ಮಾಘ ಮಾಸದ ಹುಸಿಗಾಳಿ, ಮನೆ ಪಕ್ಕದ ಸಂಪಿಗೆ ಮರದ ಕಂಪು ನಾಸಿಕಕ್ಕೇರುತ್ತಿತ್ತು, ಮೋಂಬತ್ತಿಯ ಬೆಳಕಿನಲ್ಲಿ ಬದುಕೆಂಬ ದೋಣಿಯ ಪಯಣ ನೆನೆಯುತ್ತಾ ಕೂತಿದ್ದೆ.ಪಳ್..... ಎಂದು ಗಾಜೊಡೆದ ಸದ್ದು.ಸುತ್ತಲೂ ತಡಕಾಡಿದೆ, ಆಗಲೇ ವಿನಾಶದಂಚಿನಲ್ಲಿದ್ದ ಕಿಟಕಿಯ ಗಾಜು, ಗಾಳಿಯೆಂಬ ಸುಳಿಗೆ ನೆಲದಲ್ಲಿ ಚೂರಾಗಿ ಬಿದ್ದಿತ್ತು.ಒಡೆದ ಗಾಜಿನ ಚೂರುಗಳಲ್ಲಿ ನನ್ನ ಮುಖ ಅಸ್ಪಷ್ಟವಾಗಿ ಕಾಣುತ್ತಿದ್ದರು, ಒಡೆದ ನನ್ನ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಬಿಂಬಿಸುತ್ತಿತ್ತು.ಹರಕಲು-ಮುರುಕಲಾಗಿ ಚೂರಾಗಿತ್ತು ಬದುಕು.

ಅಂದು ಮನದ ಕೂಗಿಗೆ, ಕಲೆಯ ತುಡಿತಕ್ಕೆ, ಮನೆ ತೊರೆದೆ.ಬೃಂದಾವನದಂತ ಕುಟುಂಬ ತೊರೆದು ಬಂದೆ.ನೀರಸ ಜೀವನ, ಇಷ್ಟವಿಲ್ಲದ ಕೆಲಸ, ಮನೆಯವರು ಬೇಡವೆಂದದ್ದನ್ನು ಬಯಸ್ಸುವ ಮನ, ಯಾರೂ ಎಂದೂ ತುಂಬಲಾಗದಷ್ಟು ಖಾಲಿತನವನ್ನು ನನ್ನೊಳಗೆ ಮೂಡಿಸಿತ್ತು.ನನ್ನ ಕಣ ಕಣದಲ್ಲೂ ರಂಗಮಂಟಪದ ರಕ್ತ ಹರಿಯುತ್ತಿದೆ ಎನ್ನುವ ಭಾವನೆ.ರಂಗಮಂಟಪದ ಹುಚ್ಚು ನೆತ್ತಿಗೇರಿತ್ತು, ನೂರಾರು ಬಣ್ಣಗಳ ನೆರಳು ಬೆಳಕಿನಾಟ, ನನ್ನದಲ್ಲದ ಪಾತ್ರಕ್ಕೆ ಜೀವ ತುಂಬುವ ಮಹದಾಸೆ.ಕೂಡು ಕುಟುಂಬದಲ್ಲಿ ಬೆಳೆದ ನನಗೆ, ಮನೆಯನ್ನು, ಮನೆಯವರನ್ನು ತೊರೆಯುವುದು ಕಷ್ಟವಾದರೂ, ಸರಿ-ತಪ್ಪುಗಳ ನಡುವೆ ಲೆಕ್ಕ ಹಾಕದೆ ಮನೆ-ಮನದ ಹೊರನಡೆದಿದ್ದೆ.ಮೊದ-ಮೊದಲು, ಊರ ಬಸ್ಸು ಕಣ್ಣೆದುರು ಕಂಡಾಗ, ಎಲ್ಲಾ ಬಿಟ್ಟು ಹೊರಟೇ ಬಿಡುವ ಎನಿಸುತ್ತಿತ್ತು.ಯಾವುದಾದರು ವಿಷಯಕ್ಕೆ ತೀರಾ ಹಪಹಪಿಸಿದಾಗ, ಅದು ದಕ್ಕೇ ದಕ್ಕುತ್ತದೆ ಎಂಬಂತೆ ತೆರೆದುಕೊಂಡದ್ದೇ ನನ್ನ ನಾಟಕ ಸಂಸ್ಥೆ.

ಎಲ್ಲಾ ಸರಿಯಾಗಿದೆ ಎಂದೆನಿಸುತ್ತಿತ್ತು ಒಂದೈದು ತಿಂಗಳು, ಬರು-ಬರುತ್ತಾ ಜೀವನ ವಾಸ್ತವಕ್ಕೆ ತಿರುಗಿತು.ಹಚ್ಚಿದ ರಂಗಮಂಟಪದ ಬಣ್ಣ ನಗರೀಕರಣ, ಆಧುನೀಕರಣದ ನೀರಿಗೆ ಕೊಚ್ಚಿಹೋಯಿತು.ಕಲೆಗೆಲ್ಲಿದೆ ಬೆಲೆ ಎನ್ನುವಂತಾಯಿತು? ಬದಲಾಗುತ್ತಿದ್ದ ಸಮಾಜದ ನಡುವೆ, ಯಾರೋ ನನ್ನ ಬೀದಿಗೆಳೆದು, ನನ್ನಿಂದ ಎಲ್ಲವನ್ನೂ, ಎಲ್ಲರನ್ನೂ ಕಸಿದುಕೊಂಡು, ನನ್ನ ಅನಾಥನನ್ನಾಗಿ ಮಾಡಿದರೆನಿಸುತ್ತಿತ್ತು."ಜೀವನ ನೀ ಕಂಡ ಕನಸಿನಂತಿರುವುದಿಲ್ಲ ಮಾಣಿ!!!!!", ಎಂದ ತಾತನ ಮಾತು ನನ್ನ ಪದೇ ಪದೇ ಮನೆ ಕಡೆ ಸೆಳೆಯುತ್ತಿತ್ತು.

ಕತ್ತಲಿನ ಮೂಲೆಯಲ್ಲಿ ಬದುಕು ಚಂದವಾಗಿದೆ ಅನ್ನಿಸಲು ಶುರುವಾಗಿತ್ತು.ಹೀಗೆ ದಿನೇ-ದಿನೇ ನಾನು ಮೂಲೆ ಸೇರಲು ಶುರುವಾಗಿದ್ದಾಗ, ಬಯಲಿನಾಟದ ವೈವಿಧ್ಯಮಯ ರಂಗು ನನ್ನೆದುರೆ ಕೊಚ್ಚಿಹೋಗುತ್ತಿದ್ದುದ್ದನ್ನು ನಾ ಸಹಿಸದಾದೆ.ಎಣಿಸಿದಷ್ಟು ಹೆಚ್ಚುವ ದುಃಖಕ್ಕೆ ಮುಲಾಮು ಹುಡುಕುವುದರಲ್ಲೇ ಕಳೆದುಕೊಂಡಿರುವೆ ನನ್ನೇ ನಾ.....

ಆದರೂ, ಬದುಕಿನಲ್ಲಿ ಬಂದದ್ದನ್ನು ಬಂದಂತೆಯೇ ಸ್ವೀಕರಿಸುವುದನ್ನು ಕಲಿಸಿದ ರೀತಿಗೆ, ಬದುಕು ಬೊಗಸೆಯಲ್ಲಿ ಹಿಡಿದು ನೀಡುತ್ತಿರುವ ಪ್ರೀತಿಗೆ ಚಿರ ಋಣಿ ನಾನು.

ಇಂದು, ಕಳೆದುಹೋದ ನನ್ನ, ಒಡೆದ ಗಾಜಿನ ಚೂರುಗಳಲ್ಲಿ ಹುಡುಕುತ್ತಿರುವೆ.
  
            ‌‌‌                                              ~ಇಂತಿ ನೊಂದ ಕಲಾವಿದ




Thursday, 8 March 2018

ಕಾಡುವ ಅವನ ನೆನಪು

ಕಾಡುವ ಅವನ ನೆನಪು💞

  ಸೋತಿರುವೆ ನಿನ್ನ ಬೊಗಸೆಯಷ್ಟು ಪ್ರೀತಿಗೆ💓
  ಋಣಿಯಾಗಿರುವೆ ನಿನ್ನ ಗುಬ್ಬಚ್ಚಿ ಗೂಡಿನಂತ               
  ಮನದಲ್ಲೊಂದು ಜಾಗಕ್ಕೆ
  ನೀ ನನ್ನ ರಾತ್ರಿಯ ಕನಸುಗಳಲ್ಲಿ ಕಳೆದು 
  ಹೋಗುವುದೇಕೆ???
  ಖಾಯಂ ಆಗಿ ಮನದಲ್ಲೊಂದು ಜಂಟಿ ಖಾತೆ ತೆರೆಯುವ      ಬಯಕೆ.........!!!!

/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನ...