Sunday, 25 February 2018

ಹುಡುಕಾಟ

ಪ್ರೀತಿಯ ಆದಿತ್ಯ,

ಪ್ರತಿ ಬಾರಿ ಊರಿಂದ ಬಸ್ಸು ಹತ್ತಿ ಕುಳಿತ ಮೇಲೆ, ಇನ್ನಿಲ್ಲದಂತೆ ಕಾಡುವ ಹಾಡಿದು.

"ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು,
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ
ಮುರಿದು ಹೋಯಿತೇ ಈಗ ಆ ಪುಟ್ಟ ಗೂಡು."
ಆದಿ ನೀ ಯಾವಗಲೂ ಗುನುಗುತ್ತಿದ್ದ ಹಾಡಿದು.

     ಊರಿಂದ ಬಸ್ಸು ಹತ್ತಿ, ಕಿಟಕಿ ಸೀಟ್ ಹಿಡಿದು ತಲೆಯಾನಿಸಿ ಕೂತಾಗ, ಸೀಟು ಸಿಕ್ಕಿತು ನೆಮ್ಮದಿಯಿಂದ ಹೋಗಬಹುದು ಎನ್ನುವ ಭಾವಕ್ಕಿಂತ, ನೆನಪಿನ ಬುತ್ತಿಯಿಂದ ಒಂದೊಂದೆ ಹೆಜ್ಜೆ ಗುರುತನ್ನು ಎಳೆ ಎಳೆಯಾಗಿ ತೆರೆದಿಡುವ  ಸರದಿ ನನ್ನದಾಗುತ್ತದೆ.ನನ್ನೂರು, ನನ್ನ ಮನೆ, ನನ್ನಪ್ಪ ಅಮ್ಮನ ಬೆಚ್ಚಗಿನ ಪ್ರೀತಿಯಲ್ಲಿ  ಪುಟ್ಟ ಗೂಡು ಕಟ್ಟಿದ್ದ ಸಮಯವದು.ಹಕ್ಕಿ ಗೂಡು ಬಿಡುವ ಸಮಯ ಬಂದಾಗಿತ್ತು, ತನ್ನ ರೆಕ್ಕೆ ಬಿಚ್ಚಿ ಬಾನಿಗೆ ಹಾರುವ ತವಕ.ಈ ಹುಚ್ಚುಕೋಡಿ ಮನಸ್ಸಿನ ಹಕ್ಕಿಗೆ  ಜೊತೆಯಾಗಿದ್ದು ನೀನು ಆದಿ.
    ಮೊದಲ ದಿನದ ಕಾಲೇಜು, ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿತ್ತು.ಮಳೆಯಲ್ಲಿ ನೆನೆಯುತ್ತಾ ಕಾಲೇಜಿನೆಡೆಗೆ ಓಡುತ್ತಿದ್ದ ನನಗೆ, ಜೊತೆಯಾದದ್ದು ನೀನು.ನೆನೆದು ತೊಪ್ಪೆಯಾಗಿದ್ದ ನಮಗೆ, ಕ್ಯಾಂಟೀನ್ ಕಡೆಗೆ ಹೋಗದೆ ಬೇರೆ ದಾರಿಯಿರಲಿಲ್ಲ.ಮಳೆಯಲ್ಲಿ ನೆನೆದ ನನಗೆ, ನಿಲ್ಲದ ಸೀನು..."ಅಕ್ಷಿ ......ಅಕ್ಷಿ.....ಅಕ್ಷಿ....ಅ...... ".ಕೈಯಲ್ಲಿ 2 ಲೋಟ ಕಾಫಿ ಹಿಡಿದು ನನ್ನೆದುರಿಗೆ ಬಂದು ನೀ ಹೇಳಿದ್ದು ನನ್ನ ಮನದಲ್ಲಿನ್ನು ಅಚ್ಚಳಿಯದೆ ಉಳಿದಿದೆ, " ರೀ ತಗೊಳ್ಳಿ ಕಾಫಿ ಕುಡಿರೀ, ಮಲೆನಾಡ ಮಳೆಗೆ ಸ್ಟ್ರಾಂಗ್ ಕಾಫಿ ಕಾಂಬಿನೇಶನ್ ಸಕ್ಕತ್ತಾಗಿರುತ್ತೆ.ಎಲ್ಲಿಯವರು ನೀವು, ಬಯಲುಸೀಮೆಯವರ, ಸೋನೆ ಮಳೆಗೆ ಅಕ್ಷಿ ಹೊಡಿತಿರೋದು ನೋಡಿದ್ರೆ ಆ ಕಡೆಯವರೆ ಅನ್ಸುತ್ತೆ.ಏನಿಲ್ಲ, ಇನ್ನೊಂದು ಎರಡು ಜಡಿ ಮಳೆಲಿ ನೆನದ್ರೆ ಅಭ್ಯಾಸ ಆಗುತ್ತೆ.ಹಾ ಕೇಳೋದು ಮರ್ತಿದ್ದೆ, ಯಾವ ಇಯರ್, ಫ್ರೆಶರ್ರಾ??", ನನಗೆ ಮಾತಡ್ಲಿಕ್ಕೆ ಅವಕಾಶ  ಕೊಡ್ದೆ ಹೀಗೆ ಪಟ ಪಟ ಅಂತ, ಮಾತಡುತ್ತಿದ್ದ ನಿನ್ನ ನೋಡಿ ನನ್ನ ಮನದಲೊಮ್ಮೆ ಪ್ರೀತಿ ಗಂಟೆ ಬಾರಿಸಿತ್ತು.ಅಲ್ಲಿಂದ ಶುರುವಾಯ್ತು ಮಲೆನಾಡಿನಲ್ಲಿ  ಮಳೆ ಹುಡುಗನ ಜೊತೆ ಜರ್ನಿ. 

   ಕಾಲೇಜಿನ ಮೊದಲ ದಿನದ, ಮೊದಲ ಕ್ಲಾಸ್ ಬಂಕ್ ಮಾಡಿದ ಕೀರ್ತಿ ನಮ್ಮದು.ಅಲ್ಲಿಂದ ಅದೆಷ್ಟು ಕ್ಲಾಸ್ ಬಂಕ್ ಗಳು, ಅವೆಷ್ಟು ಬಾರಿ  ಮಲೆನಾಡ ಜಡಿ ಮಳೆಯಲ್ಲಿ ನೆನೆದ ನೆನಪು.ನಾ ಹಾಸ್ಟೆಲ್ನಲ್ಲಿ ಇದ್ದೆನೆಂದು, ನೀ ಮನೆಯಿಂದ ನನಗೆ ಮಧ್ಯಾಹ್ನಕ್ಕೆ ಊಟದ ಡಬ್ಬಿ ತರುತ್ತಿದ್ದದ್ದು.ಅದ್ಹೇಗೆ ಮರೆಯಲಿ ನಿಮ್ಮಮ್ಮನ ಕೈರುಚಿ.ನೆನಪಿದೆಯಾ ಮೊದಲ ಸೆಮಿಸ್ಟರ್ ನಲ್ಲಿ  ಓದಲಾಗದ ಎಲೆಕ್ಟ್ರಾನಿಕ್ಸ್  ಸಬ್ಜೆಕ್ಟ್ ನ್ನು  ಲೈಬ್ರರಿಯಲ್ಲಿ ಕೂತು ಓದಿ, ಎಕ್ಸಾಮ್ನಲ್ಲಿ ಟಾಪ್ ಮಾಡಿದ್ದು.

       ನೀ ಯಾವಗಲೂ ಹಾಡುತ್ತಿದ್ದ ಭಾವಗೀತೆಗಳ ತುಣುಕು ನನ್ನ ಕಿವಿಯಲ್ಲಿನ್ನು ಗುಯ್ಗುಟ್ಟುತ್ತದೆ.ಒಂದೇ ಎರಡೇ,
"ಯಾವ ಮೋಹನ ಮುರಳಿ ಕರೆಯಿತು", " ನೀನಿಲ್ಲದೆ ನನಗೇನಿದೆ", "ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ"," ಅಮ್ಮ ಹಚ್ಚಿದೊಂದು ಹಣತೆ", "ಕಾಣದ ಕಡಲಿಗೆ ಹಂಬಲಿಸಿದೆ ಮನ","ದೀಪವು ನಿನ್ನದೆ ಗಾಳಿಯು ನಿನ್ನದೆ","ಎದೆ ತುಂಬಿ ಹಾಡಿದೆನು ಅಂದು ನಾನು"......... ಅದೆಷ್ಟು ಅಡಿಗರ, ಜಿ.ಎಸ್.ಶಿವರುದ್ರಪ್ಪ ನವರ ಪದಗಳಿಗೆ ಜೀವ ತುಂಬುತ್ತಿದ್ದೆ ನೀ.ನಿನ್ನಷ್ಟು ಹಾಡಲು ಬರದ ನನ್ನನ್ನು ಪ್ರೊಫೆಷನಲ್ ಸಿಂಗರ್ ಮಾಡುವ ಬಯಕೆ ನಿನ್ನದು.ಅದೆಂತ ಹುಚ್ಚು ಬಯಕೆ ನಿನ್ನದು, ನಾನಿಂದಿಗೂ ಅರಿಯೆ.ನೀ ಹಾಡುತ್ತ ಕುಳಿತರೆ, ನನ್ನ ಪದಗಳಿಗೆ ಸ್ಫೂರ್ತಿಯಾಗುತ್ತಿದ್ದ ಉತ್ಸಾಹದ ಚಿಲುಮೆ ನೀನು.ಬರೀ ಪದಗಳನ್ನು ಹೆಕ್ಕುತ್ತಿದ್ದ ನನಗೆ, ಪದಗಳನ್ನು ಪೋಣಿಸಲು ಅನುವು ಮಾಡಿಕೊಟ್ಟ ಗೆಳೆಯ.ಅದೆಂತ ಸಾಹಿತ್ಯದ ಗೀಳು ನಮ್ಮಿಬ್ಬರಿಗೆ....ಅದೆಷ್ಟು ರಾತ್ರಿಗಳು, ಲೆಕ್ಕವೇ ಇಲ್ಲ,  ನೀ ತಂದುಕೊಟ್ಟ ಕಾದಂಬರಿಗಳ ರಾತ್ರಿಯೆಲ್ಲ ಓದಿ ಮುಗಿಸುವ ಹುಚ್ಚು ನನ್ನದು.

    ಅದೆಲ್ಲಿಂದ ಸಿಕ್ಕಿದೆಯೋ ನೀನು, ಕಾಣದ ಊರಲ್ಲಿ ಒಂಟಿತನವೇನೆಂದು ತಿಳಿಯಲೇ ಇಲ್ಲ ನನಗೆ.ನಿನ್ನ ಬೆಚ್ಚಗಿನ ಪ್ರೀತಿಯಲ್ಲಿ, ಕನಸು ಕಾಣುತ್ತ ಹಾಯಾಗಿದ್ದೆ ನಾನು.ನನ್ನೆಲ್ಲ ಕನಸುಗಳಿಗೆ ನೀರೆರೆದು ಪೋಷಿಸಿದವ ನೀನು ಆದಿ.

      ಡಿಗ್ರಿ ಮುಗಿಯಿತು.ಹಕ್ಕಿ ತನ್ನ ಗೂಡಿಗೆ ಮರಳಿ ಸೇರುವ ಕಾಲ ಬಂದಾಗಿತ್ತು. ಮುಷ್ಟಿಯೊಳಗಿದ್ದ ಚಿಟ್ಟೆಯಂಥಾ ಕನಸು ಇಣುಕಿಣುಕಿ ನೋಡುತ್ತಿದ್ದ ಕಾಲವದು.. ಕೆಲಸ ಹುಡುಕುವ ನೆಪ ಹೇಳಿ ಬೆಂಗಳೂರ ದಾರಿ ಹಿಡಿದಿದ್ದೆ ನೀನು.ನಿನ್ನ ಸಂಪರ್ಕವೇ ಇಲ್ಲದಂತಾಗಿತ್ತು.ಆದರೂ ನಿನ್ನ ನಿರೇಕ್ಷೆಯಲ್ಲಿದ್ದೆ ನಾನು..........ಆದಿ

  ಅಂದೇಕೋ ನಾನಿದ್ದೂರು, ನೀನಿಲ್ಲದೂರು ನನ್ನದ್ದಲ್ಲವೆಂದು ಸ್ವಲ್ಪ ಹೆಚ್ಚಾಗೇ ಕಾಡುತ್ತಿತ್ತು. ಬಿಡದೇ ಕಿತ್ತು ತಿನ್ನುವ ಒಂಟಿತನ, ಕಾಡುವ ನಿನ್ನ ನೆನಪು, ಮತ್ತೇನನ್ನೋ ಅರಸುವ ಮನಸ್ಸು.
ಅದಕ್ಕೆ ಸರಿಯಾಗಿ ಪ್ರಕೃತಿಯು ನನ್ನ ಮೇಲೆ ಮುನಿದಂತೆ, ಕಾರ್ಮೋಡ ಒಡೆದು ಅಳುವಂತ್ತಿತ್ತು.ಇನ್ನೇನು ಮೋಡ ತನ್ನ ಗರ್ಭ ಹಿಸುಕಿಕೊಂಡು, ಹುಯ್ಯೋ ಎಂದು ಮಳೆ ಹರಿಸುತ್ತದೆ ಅನ್ನುವಷ್ಟರಲ್ಲಿ, ಎದುರಿಗೆ ಬಂದ ಅಮ್ಮ ನನ್ನ ವಾಸ್ತವಕ್ಕೆ ತಂದು ನಿಲ್ಲಿಸಿದ್ದಳು.ಅಮ್ಮ ತನ್ನ ಕೈಯಲ್ಲಿ ಹುಡುಗನ ಫೋಟು ಹಿಡಿದು ತೋರಿಸಿದಳು....ಏನು  ಮಾತಾಡಲು ತೋಚದೆ ಹೂ ಅಂದಿದ್ದೆ.
ಬಣ್ಣದ ಚಿಟ್ಟೆಯ ಹಿಂದೆ ಓಡಿ, ಬಿಡದೆ ಹಿಡಿದಮೇಲೆ
ಬೆರಳುಗಳ ತುದಿಯಲ್ಲಿ ಬಣ್ಣ ಮೂಡಿದ ನೆನಪು.........ಈಗ ಬಣ್ಣ ಬಣ್ಣದ ನೆನಪಷ್ಟೆ ನನ್ನ ಪಾಲಿಗೆ.
ಇನ್ನೂ ನಿನ್ನ ನಿರೀಕ್ಷೆಯಲ್ಲಿರುವ......

                                                  ಇಂತಿ ನಿನ್ನ ಪ್ರೀತಿಯ,
                                                    ಪೂರ್ವಿ  ಕುಲ್ಕರ್ಣಿ




    "ಆರು ವರ್ಷಗಳ ಹಿಂದೆ ನಿನ್ನ ನಾ ನೋಡಿದ್ದು, ಕೊನೆಯ ಭೇಟಿ ನಮ್ಮ ನೆಚ್ಚಿನ ಗಣಪತಿ ಗುಡಿಯಲ್ಲಿ.ಇಂದು ನಿನ್ನನ್ನು ನಿನ್ನ ಸಂಸಾರದ ಜೊತೆ ನೋಡಿ ನನ್ನ ಜೀವ ನಲುಗಿತು, ಎದೆಯಲ್ಲಿನ ಕಂಪನ ನಾ ಹೇಳಲಾರೆ ಆದಿ.ನನ್ನ ಈ ಸಂಸಾರವೆಂಬ ಸಮುದ್ರದಲ್ಲಿ ಮುಳುಗಿದ್ದ ನನಗೆ, ನಿನ್ನ ನೋಡಿ, ಅಲ್ಮೇರಾನಲ್ಲಿ ಭದ್ರಾವಗಿರಿಸಿದ್ದ  ಹಳೆಯ ಡೈರಿಯ ಪತ್ರ ತೆರೆಯುವಂತಾಯಿತು.ನನ್ನ ಮದುವೆಯ ಹಿಂದಿನ ದಿನ ಗೀಚಿದ ಪತ್ರ.ಪತ್ರದ ಕೊನೆಯ ಸಾಲುಗಳು ನನ್ನನ್ನೇ ಅಣಕಿಸಿದಂತಿದೆ, ಚಿಟ್ಟೆಯ ಹಿಂದೆ ಓಡಿದ್ದೂ, ಬಿಡದೆ ಹಿಡಿದದ್ದು , ಮತ್ತೆ ಚಿಟ್ಟೆ ಹಾರಿ ಹೋದದ್ದು ನಿಜ, ಆದರೆ  ವರ್ಷಗಳೆದಂತೆ ನೆನಪುಗಳ ಬಣ್ಣ ಮಾಸುವುದು.ಮಾಸುತ್ತಿರುವ ನೆನಪುಗಳ ಹಳೆಯ ಬಣ್ಣಗಳಲ್ಲಿ, ಹೊಸ ಬಣ್ಣ ಮೂಡಿಸುವ ಬಯಕೆ." ಎಂದು ತನ್ನ ಎಂದಿನ ಡೈರಿ ಗೀಚಿದಳು.

"ಅದೆಷ್ಟು ಪುಸ್ತಕ, ಹಾಡು... ನಾಟಕವೆಂದು ಓಡಾಡುತ್ತಿದ್ದೆವು ನಾವು.ಆ ಉತ್ಸಾಹದ  ಚಿಲುಮೆಯಾಗಿದ್ದ ಪೂರ್ವಿ ಮತ್ತೆ ನನಗೆ ವಾಪಸ್ಸು ಸಿಗಲೇ ಇಲ್ಲ.ನೀರಸ ಬದುಕು, ಸಂಸಾರದ ಜಂಜಾಟದಲ್ಲಿ ತನ್ನ ಅಸ್ಥಿತ್ವವನ್ನು ಕಳೆದುಕೊಂಡಿರುವೆ.ನನ್ನ ಮೊದಲಿನ ಪೂರ್ವಿಯ ಹುಡುಕಾಟದಲ್ಲಿ, "ಪೂರ್ವಿ ಸಾವಂತ್ ದೇಶಪಾಂಡೆ" ಸದಾ ಸೋಲುತ್ತಾಳೆ.ಈ ಬಾರಿ ಹಾಗಾಗುವುದಿಲ್ಲ, ಬದಲಾಗುತ್ತೇನೆ." ಎಂದು ಯೋಚಿಸುತ್ತಿದ್ದ ಪೂರ್ವಿ..... 
"ಅಮ್ಮ ತಿನ್ಲಿಕ್ಕೆ ಏನಾದ್ರು ಕೊಡು" ಎಂಬ ಮಗಳ ಅಳಲಿಗೆ ವಾಸ್ತವಕ್ಕೆ ಬಂದಳು.ತನ್ನ ಮುಂದಿದ್ದ ಎರಡು ಡೈರಿಗಳನ್ನು ತನ್ನ ಅಲ್ಮೇರಾದಲ್ಲಿ ಭದ್ರವಾಗಿಸಿ,  ಉಸ್ಸೆಂದು ನಿಟ್ಟುಸಿರು ಬಿಡುತ್ತಾ ಮೇಲೆದ್ದಳು ಪೂರ್ವಿ ದೇಶಪಾಂಡೆ.
"ನಿರಂತರ ಜಂಜಾಟ, ನಿಲ್ಲದ ಹುಡುಕಾಟ" ಎನ್ನುತ್ತಾ ತನ್ನ ಸಂಸಾರದ ಸಮುದ್ರಕ್ಕೆ ಮತ್ತೆ ಸೇರಿದಳು ಮಿಸೆಸ್ ದೇಶಪಾಂಡೆ.




   

/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನ...