Friday, 26 January 2018

ಕನಸೆಂಬ ಬಿಸಿಲುಕುದುರೆಯೇರಿ ಬಣ್ಣದಲೋಕಕ್ಕೆ ಹಾರುವ ಬಯಕೆ

       ಕನಸುಗಳ ಬೆನ್ನನ್ನಟ್ಟಿ  ಹೊರಟ್ಟಿದ್ದೆ ನಾನು.ಇನ್ನೂ ಡಿಗ್ರಿ ಪಡೆಯುವ ಮುನ್ನವೇ ಕೆಲಸ ಮಾಡುವ, ಕೆಲಸದ ಪರಿ ತಿಳಿಯುವ ಕನಸು ನನ್ನದು.ಇದಕ್ಕೆ ಸರಿಯಾಗಿ ಸಿಕ್ಕ ಅವಕಾಶವೇ ಇಂಟರ್ನ್ಶಿಪ್. ಸೀನಿಯರ್ ರೆಫರೆನ್ಸ್ ಮೇರೆಗೆ  ಈಸ್ಟ್-ಶೈನ್ ಎಂಬ ಸ್ಟಾರ್ಟಪ್ಪಿನ  ಪವನ್ ದೇಶಪಾಂಡೆಯವರೊಂದಿಗೆ  ಇಂಟರ್ನ್ಶಿಪ್ ಬಗ್ಗೆ  ಮಾತಾಡಿದ್ದೆ.ಅಪ್ಪ ಅಮ್ಮ ಸುತಾರಾಂ ಒಪ್ಪಿರಲಿಲ್ಲ.ರಜೆಯಲ್ಲಾದರು ಸ್ವಲ್ಪ ಆರಾಮವಾಗಿರಲಿ ಎನ್ನುವ ಕಾಳಜಿಯವರದು.ಸುಮ್ಮನೆ ಕೂರುವ ಹವ್ಯಾಸ ನನಗಿಲ್ಲ.

      ಕೊನೆಗೂ ಅಪ್ಪನನ್ನು ಒಪ್ಪಿಸುವಲ್ಲಿ ಜಯಶಾಲಿಯಾದೆ. ಮಗಳಿಗೆ ನೋವಾಗದಿರಲೆಂದು ಬಾಯಿ ಮಾತಿಗೆ ಹೋಗಿ ಬಾ ಎಂದರು ಅಪ್ಪ, ಅವರಿಗೆ ನೋವಾಗದಿರಲೆಂದು ನಾ ಹೋಗೋದಿಲ್ಲ ಎಂದೆ. ಆದರೆ  ಹುಚ್ಚು ಕೋಡಿ ಮನಸ್ಸು ಕೇಳುತ್ತಾ, ಕನಸುಗಳೆಂಬ ಬಿಸಿಲುಕುದುರೆಯೇರೋ ಬಯಕೆ ನನ್ನದು.ಮಗಳ ಮೇಲೆ ಅತೀವ ಕಾಳಜಿ ಅಪ್ಪ ಅಮ್ಮನದು. ಹೇಗೋ ಅಪ್ಪ ಅಮ್ಮನ ಮನವೊಲಿಸಿ ಬಣ್ಣದಲೋಕಕ್ಕೆ  ಕನಸೆಂಬ ಬಿಸಿಲುಕುದುರೆಯೇರಿ ಹಾರುವ ಸರದಿ ನನ್ನದಾಯಿತು.

      ಅಂದು ಅಪ್ಪನನ್ನು ಒಪ್ಪಿಸಿ ಬೆಂಗಳೂರಿಗೆ ಹೊರಡಲು ನಿರ್ಧಾರ ಮಾಡಿದಾಗ ರಾತ್ರಿ ಹನ್ನೊಂದು ಗಂಟೆಯಾಗಿತ್ತು.ನನ್ನೆಲ್ಲಾ ನಿರ್ಧಾರಗಳಿಗೆ ಬೆಂಬಲ ನೀಡುವವಳು ನನ್ನಜ್ಜಿ.ಅಂದು ನಿದ್ದೆ ಮಾಡಿದ್ದ ನನ್ನಜ್ಜಿಯನ್ನು ಎಬ್ಬಿಸಿ, ನಡೀ ಬೆಂಗಳೂರಿಗೆ ಹೋಗುವ 12 ಗಂಟೆ ಬಸ್ಸಿಗೆ ಎಂದೆ. ಒಂದೂ ಮಾತಾಡದೆ ಲಗ್ಗೇಜ್ ರೆಡಿ ಮಾಡಿಕೊಂಡಳು.ಅದು ನಡುರಾತ್ರಿ, ಬಸ್ಸುಗಳ ಸೌಕರ್ಯ ವಿರಳವೆಂಬ ಅರಿವು ಇಲ್ಲದಂತೆ ಅಪ್ಪನೊಂದಿಗೆ ಬಸ್ಟ್ಯಾಂಡ್  ತಲುಪಿದ್ದೆವು ನಾವು.ವಿಪರ್ಯಾಸವೆಂದರೆ ನಮ್ಮ ಊಹೆ ಸರಿಯಾಗಿತ್ತು, ಸ್ಮಶಾನ ಮೌನ ತುಂಬಿದ್ದ ಬಸ್ಟ್ಯಾಂಡ್ನಲ್ಲಿ , ವಿಚಾರಿಸಲು ಒಂದು ನಾಯಿಯು ಗತಿಯಿರಲಿಲ್ಲ.ಬಂದ ದಾರಿಗೆ ಸುಂಕವಿಲ್ಲವೆಂದು ಮನೆ ತಲುಪಿದೆವು.ಮುಂಜಾನೆ ಬೇಗನೆ ಹೊರಡೋಣವೆಂದು ಅಜ್ಜಿ ನನ್ನ ಮಲಗಿಸಿದಳು.ಮರುದಿನ ಬೆಳಗ್ಗೆ  4ಕ್ಕೆ ಭಯಮಿಶ್ರಿತ  ಉತ್ಸಾಹದೊಂದಿಗೆ ಶುರುವಾಯ್ತು ಬಣ್ಣದಲೋಕಕ್ಕೆ ಪ್ರಯಾಣ.

     ಈಸ್ಟ್-ಶೈನ್ ಅಡ್ರೆಸ್ ಪಡೆದು ಅಲ್ಲಿಗೆ ತಲುಪವಷ್ಟರಲ್ಲಿ ಜೀವ ಹಿಡಿಯಷ್ಟಾಗಿತ್ತು. ಮೊದಲ ದಿನ, ಎದೆಯಲ್ಲೇನೋ ಕಂಪನ, ರೆಸ್ಯೂಮ್ ಕೈಯಲ್ಲಿ ಹಿಡಿದು ಒಳನೆಡೆದಾಗ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಂತಾಗಿತ್ತು.ಎಷ್ಟೋ ಇಂರ್ಟವ್ಯೂ ಎದುರಿಸಿ ಅಭ್ಯಾಸವಿದ್ದರು, ಆ ದಿನದ ನಡುಕ ಅಚ್ಚಳಿಯದಂತೆ ಮನದಲ್ಲಿ ಉಳಿದಿದೆ. ಆಗ ತಾನೆ ಮೊಟ್ಟೆಯಿಂದ ಹೊರ ಬಂದ ಹಕ್ಕಿಯಂತೆ, ಎಲ್ಲರನ್ನೂ, ಎಲ್ಲವನ್ನೂ ಕಣ್ಣು ಪಿಳಿ-ಪಿಳಿ ಮಾಡುತ್ತ ನೋಡುತ್ತಿದ್ದ ನನ್ನ ಮೇಲೆ, ಅಲ್ಲಿದ್ದವರೆಲ್ಲ ಪ್ರಶ್ನೆಗಳ ಸುರಿಮಳೆ ಸುರಿಸಿದರು. "ರಜೆಯಲ್ಲಿ ಎಂಜಾಯ್ ಮಾಡೋದು ಬಿಟ್ಟು ಇಲ್ಲಿಗೇಕೆ ಬಂದೆ?" ಎಂದೊಬ್ಬರು ಕೇಳಿದರೆ, "ನಿನಗೆ ಈ ಕಂಪನಿಗೆ ರೆಫರೆನ್ಸ್ ಯಾರು ಹೇಳಿದ್ದು?" ಅನ್ನೋ ಅನುಮಾನ ಒಬ್ಬರದು, "ಇನ್ನೂ ಇಂಜಿನಿಯರಿಂಗ್ ಡಿಗ್ರಿ ಮುಗಿದಿಲ್ವಾ, ಯಾವ ವರ್ಷ ಪಾಸಡ್-ಔಟ್ ಆಗೋದು ನೀನು?" ಅನ್ನೋ ಗುಮಾನಿ ಇನ್ನೊಬ್ಬರದು.ಇವರೆಲ್ಲರ ಕುತೂಹಲಕ್ಕೆ ತೆರೆ ಎಳೆಯುವಲ್ಲಿ ಮೊದಲ ದಿನದ ಕೆಲಸ ಮುಗಿದಿತ್ತು.

     ಬೆಂಗಳೂರಿಗೆ ಹೊಸಬಳಾದ ನಾನು, ಶರ ವೇಗದಲ್ಲೋಡುತ್ತಿರುವ ಜನರೊಡನೆ, ಪ್ರಪಂಚದೊಡನೆ  ಹೇಗೆ ಹೊಂದುತ್ತಾಳೋ, ಓಡಾಡುತ್ತಾಳೋ ಎನ್ನುವ ಆತಂಕದಲ್ಲಿದ್ದ ನಮ್ಮನೆ ಜನರ ಊಹೆ ಸುಳ್ಳಾಗಿತ್ತು. ಎಲ್ಲಾ ಕಡೆ ಒಬ್ಬಳೆ ಓಡಾಡಿ ಅಭ್ಯಾಸವಿದ್ದ ನನಗೆ, ಅಲ್ಲಿನ ವಾತಾವರಣಕ್ಕೆ ಹೊಂದುವುದು ಕಷ್ಟವೇನಾಗಲಿಲ್ಲ.ಸಹಜವಾಗಿ ಪ್ರಾರಂಭದ ಒಂದೆರಡು ದಿನ ಬಿಎಂಟಿಸಿಯಲ್ಲಿ ಕಿಕ್ಕಿರಿದ ಜನ,ಬೇಸರ ತರಿಸುವ ಟ್ರಾಫಿಕ್ ಜಾಮ್ ಇರುಸು-ಮುರುಸು ಮೂಡಿಸಿತ್ತಾದರು,ಕ್ರಮೇಣ ಅಭ್ಯಾಸವಾಗಿತ್ತು.

       ಅಲ್ಲಿ ಕೆಲಸಮಾಡುತ್ತಿದ್ದವರು ವಯಸ್ಸಿನಲ್ಲಿ ನನಗಿಂತ ತುಂಬಾ ದೊಡ್ಡವರೇನಲ್ಲ, ಒಂದೆರಡು ವರ್ಷ ದೊಡ್ಡವರಿರಬಹುದು.ಎಲ್ಲರಿಗಿಂತ ಚಿಕ್ಕವಳಾಗಿದ್ದ ನನಗೆ, ಏನಾದರು ತಪ್ಪು ಮಾಡಿದರೆ ಎಕ್ಸ್ ಕ್ಯೂಸ್ ಸಿಗುತ್ತೆ ಅನ್ನೋ ಖುಷಿ ನನ್ನದು.ದಿನವೂ ಬೇಗನೆ ಆಫೀಸ್ಗೆ ಹೋಗುತ್ತಿದ್ದೆ.  ಪ್ರತಿ ದಿನ ಹೋಗುವ ಮುನ್ನ ಎದುರಿಗಿದ್ದ ಹನುಮನ ಗುಡಿಗೆ ಹೋಗಿ ಆಫೀಸ್ ತಲುಪುವುದು  ರೂಢಿಯಾಗಿತ್ತು.ಅವರೆಲ್ಲರಿಗೂ ಹೋಲಿಸಿದರೆ ನಾನೇನು ಹೆಚ್ಚಿನ ಕೆಲಸ ಮಾಡುತ್ತಿರಲಿಲ್ಲ ಎಂಬುದು ಸತ್ಯ. ಆದರೂ ಚೂರು-ಪಾರು ಕಲಿಯುವಾಸೆ ನನ್ನದು.ಅದೇ ಆಸೆಯಿಂದ ಎಲ್ಲರ ತಲೆ ತಿನ್ನುತ್ತಿದ್ದೆ ಎಂದು ತಿಳಿಯಲು ಬಹಳ ದಿನಗಳು ಬೇಕಾಗಿರಲಿಲ್ಲ. ಇದೇ ಕಾರಣಕ್ಕೆ ನನ್ನ ಪಕ್ಕದಲ್ಲಿ ಕೂರುತ್ತಿದ್ದ ವೆಂಕಟ್ ಜಾಗ ಬದಲಿಸಿದರು ಎಂದು ದರ್ಶನ್ ಸರ್ ನನ್ನ ಕಾಲೆಳೆದಿದ್ದು ಇನ್ನೂ ನೆನಪಿದೆ.ವರ್ಕಿಂಗ್ ಸಮಯದಲ್ಲಿ ಎಲ್ಲರೂ ಸೀರಿಯಸ್ಸಾಗಿರುತ್ತಿದ್ದರು, ಎಲ್ಲರೂ ಹರಟಲೂ ಸಿಗುತ್ತಿದ್ದದ್ದು ಟೀ ಬ್ರೇಕ್ ಮತ್ತು ಲಂಚ್ ಬ್ರೇಕ್ನಲ್ಲೇ.ಟೀ ಬ್ರೇಕ್ ಬೆಳಗ್ಗೆ 11.30ಕ್ಕೆ ಮತ್ತು  ಮಧ್ಯಾಹ್ನ 3.30ಕ್ಕೆ, ಕಾಫಿ/ಟೀ/ಬಾದಾಮಿ ಹಾಲು ಏನಾದರೊಂದು ಕುಡಿಯುವ ಶಾಸ್ತ್ರ ಮುಗಿಸಿ, ಒಂದಿಷ್ಟು ಹರಟುತ್ತಿದ್ದೆವು, ಕುಶುಲೋಪರಿ ವಿಚಾರಿಸುತ್ತದ್ದೆವು,ಕಾಲೆಳೆಯುತ್ತಿದ್ದೆವು.ಇನ್ನು ಮಧ್ಯಾಹ್ನದ ಊಟ, ಸ್ವಲ್ಪ ಜನ ಬಾಕ್ಸ್ ನಲ್ಲಿ ಊಟ ತರುತ್ತಿದ್ದರು, ಡಬ್ಬಿ ತರದವರೊಂದಿಗೆ ಹಂಚಿಕೊಂಡು ತಿನ್ನುತ್ತಿದ್ದೆವು.ಅದಾದ ನಂತರ ನಮಗಿಷ್ಟದ ಸಮಯ, ಕೆಲವೊಮ್ಮೆ ಕೆಲಸ ಹೆಚ್ಚಿಲ್ಲದಿದ್ದರೆ ಎಲ್ಲರೂ ಸೇರಿ ಒಂದಿಷ್ಟು ದೂರ ವಾಕಿಂಗ್ ಹೋಗುತ್ತಿದ್ದೆವು, ಅದು ಗಾಸ್ಸಿಪ್ಸ್ ಸಮಯ.ಮುಕ್ತವಾಗಿ ಎಲ್ಲರೂ ಮಾತಾನಾಡುತ್ತಿದ್ದದ್ದು ಆಗಲೇ.ಇದೆಲ್ಲದರ ನಡುವೆ  ಅಪ್ಪ ಅಮ್ಮನ ಮಾತು ಮೀರಿ ಬಂದಿದ್ದೆ, ಈ ವಿಷಯ  ನನ್ನ ಸುಪ್ತ ಪ್ರಜ್ಞೆಯೊಳಗೆ, ನನ್ನನ್ನು ಪದೇ ಪದೇ ಎಚ್ಚರಿಸುತಿತ್ತು.

      ಅದೊಂದು ಗುರುವಾರ, ಆಫೀಸ್ಗೆ ಹೋದ ಮೇಲೆ ತಿಳಿಯಿತು ಅಂದು ವೀಕ್ಲಿ ಮೀಟಿಂಗ್ ಎಂದು.ಎಲ್ಲರ ಮನಸ್ಸಲ್ಲೂ ಆತಂಕ ಮನೆ ಮಾಡಿತ್ತೆಂದು ಅವರ ಮುಖದ ಮೇಲೆ ಆವರಿಸಿದ್ದ ಟೆನ್ಶನ್ ತಿಳಿಸುತ್ತಿತ್ತು.ಇದರ ಹಿಂದಿನ ಚರಿತ್ರೆ ತಿಳಿಯದ ನಾನು, ಎಂದಿನಂತೆಯಿದ್ದೆ.ಅವರೆಲ್ಲರ ಆತಂಕ ನನಗೆ ನಗು ತರಿಸಿದ್ದರು, ನಾನದನ್ನು ಮುಚ್ಚಿಟ್ಟಿದ್ದೆ.ಮಧ್ಯಹ್ನ ಮೀಟಿಂಗ್ ಆರಂಭವಾಯಿತು, ಒಬ್ಬೊಬ್ಬರೆ ತಮ್ಮ ವೀಕ್ಲಿ ರಿಪೋರ್ಟ್ ಹೇಳಬೇಕಿತ್ತು.ನನ್ನ ಸರದಿಯು ಬಂತು, ಬಂದು ನಾಲ್ಕೇ ದಿನಗಳಾದ್ದರಿಂದ ನನ್ನ ಗೊಂದಲ ಅವರೆಲ್ಲರ ನಗೆ ಕಡಲಲ್ಲಿ ತೇಲಿಸಿತು.

        ಅಲ್ಲಿನ ವರ್ಕ್ ಕಲ್ಚರ್ ನಂಗೆ ತುಂಬಾ ಹಿಡಿಸಿತು.ಒಂದು ದಿನ  ಕೆಟ್ಟ ಸುದ್ದಿಯೊಂದು ಕಾದಿತ್ತು, ಅಲ್ಲಿನ ಸಿಬ್ಬಂದಿ ಆದಿತ್ಯ ಅಣ್ಣ, ಅವರ ತಾಯಿಯನ್ನು ಕಳೆದುಕೊಂಡಿದ್ದರು,ಕೆಲ ದಿನಗಳ ಹಿಂದೆ ಸಹನ ಅವರ ಅಜ್ಜನನ್ನು ಕಳೆದುಕೊಂಡಿದ್ದರು,ಇದರ ನಿಮಿತ್ತ, ಆ ದಿನ ಕೆಲ ನಿಮಿಷಗಳ ಮೌನಾಚರಣೆ ಮಾಡಿದೆವು.ಒಬ್ಬರ ನೋವಿಗೆ ಮತ್ತೆಲ್ಲರು ಸ್ಪಂದಿಸುವ ಅಲ್ಲಿನ ಸಂಸ್ಕೃತಿ ನನ್ನ ಚಕಿತಗೊಳಿಸಿತ್ತು.ಒಂದೇ ಕುಟುಂಬದ ಮನೆಯಂತಿತ್ತು ಅಲ್ಲಿನ ವಾತಾವರಣ.

          ಅಲ್ಲಿ ಕಲಿತ ಕೆಲಸ ಸ್ವಲ್ಪವಾದರು, ಕಾರ್ಪೋರೆಟ್ ಕಲ್ಚರ್,ಒಂದು ಕಂಪನಿ ಹೇಗೆ ನಡೆಯುತ್ತದೆ ಮತ್ತು ಅಲ್ಲಿನ ಆಗು-ಹೋಗುಗಳ ಅರಿವಿಲ್ಲದ ನಾನು ಒಂದಷ್ಟು ತಿಳಿದುಕೊಂಡೆ ಎಂದರೆ ತಪ್ಪಾಗಲಾರದು.ನಿಗದಿಯಾಗಿದ್ದ ದಿನಗಳವರೆಗೂ ನಾನು ಅಲ್ಲಿ ಕೆಲಸ ಮಾಡಲಾಗಲಿಲ್ಲ, ಅನಿವಾರ್ಯ ಕಾರಣಗಳಿಂದಾಗಿ ನಾನು ಬಣ್ಣದಲೋಕಕ್ಕೆ ವಿದಾಯ ಹೇಳಬೇಕಾಯಿತು.ಹೊರಡುವ ಹಿಂದಿನ ದಿನ, ಎಲ್ಲರೊಂದಿಗೆ ಸಣ್ಣದೊಂದು ಪಾನಿಪುರಿ ಪಾರ್ಟಿಯಾಯಿತು.ಇನ್ನು ಕೊನೆಯ ದಿನ,  ಈಸ್ಟ್-ಶೈನ್ನಿಂದ ಗಿಫ್ಟ್ ಜೊತೆಗೆ ನನ್ನ ವಿದಾಯ.ಆ ಪುಟ್ಟ ವಸ್ತುಗಳು  ತರುವ ಸಂತಸ ಅಗಾಧ. ಅದನ್ನು ಪದಗಳಲ್ಲಿ  ಹಿಡಿದಿಡುವುದು ನನಗೆ ಸ್ವಲ್ಪ ಕಷ್ಟ.

           ಬದುಕು ರಂಗಿನೋಕುಳಿಯಾದದ್ದು, ಹೊಸ ಗೆಳೆತನದ ಬಂಧ- ಬಾಂಧವ್ಯಗಳು ಬೆಸೆದಿದ್ದು, ಭಾವುಕತೆಗಳು ಹೆಗಲು ತಬ್ಬಿ ನಕ್ಕಿದ್ದು ಎಲ್ಲವೂ ಬಣ್ಣದಲೋಕದಲ್ಲೆ.ಸುಮ್ಮನೆ ಕೂತಾಗ ಇದೆಲ್ಲ ನೆನೆದರೆ ಮನದಲ್ಲೊಮ್ಮೆ ಪ್ರೀತಿ-ಸ್ನೇಹದ ಒರತೆ ಚಿಮ್ಮುತ್ತದೆ.
#ಥ್ಯಾಂಕ್ಯೂ ಈಸ್ಟ್-ಶೈನ್💝



/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನ...