Wednesday, 14 June 2017

ಚಾರ್ಮುಡಿಯಲ್ಲೊಂದು ರಾತ್ರಿ!!!!

ಚಾರ್ಮುಡಿಯಲ್ಲೊಂದು ರಾತ್ರಿ!!!!
         ಅದೊಂದು ಸುಂದರ ದಿನ,ನಮ್ಮ ಪ್ರಯಾಣ ಜೈನರ ಕಾಶಿ ಮೂಡಬಿದಿರೆಯ ಕಡೆಗೆ. ಗೆಳೆಯರೊಬ್ಬರ ಮಾರ್ಗದರ್ಶನದ ಮೇಲೆ,ಚಾರ್ಮುಡಿ ಘಾಟ್ ಬೇಡವೆಂದು ಅಪ್ಪ ದಾರಿ ಬದಲಿಸಿದರು. ನಮ್ಮ ಕಾರು  ತರೀಕೆರೆ- ಕೊಪ್ಪ-ಶೃಂಗೇರಿ-ಕಾರ್ಕಳ -ಮೂಡಬಿದಿರೆಯ ದಾರಿ‌ ಹಿಡಿದಿತ್ತು.
ಅಂದು ಎಡಬಿಡದೆ  ಹೊಯ್ಯತ್ತಿದ್ದ ಮಳೆರಾಯ.ಎಲ್ಲೆಲ್ಲೂ ಹಸಿರು,ದಾರಿಯುದ್ದಕ್ಕು ಸಸ್ಯ ಕಾಶಿ,ಹಕ್ಕಿ- ಪಕ್ಷಿಗಳ ಕಲರವ.
ಆ ಮಲೆನಾಡಿನ ತಂಪು ಗಾಳಿ ಮನಸ್ಸಿಗೆ ಮುದ ನೀಡಿತ್ತು.            ಪ್ರಯಾಣದ ಅವಧಿ 6 ತಾಸಾಗಬಹುದೆಂದು ಎಣಿಸಿದ್ದ ಅಪ್ಪನ ಊಹೆ ಸುಳ್ಳಾಗಿತ್ತು.ನಾವು ಮೂಡಬಿದಿರೆ ಸೇರಲು ಏಳೆಂಟು ತಾಸುಗಳೆ ಹಿಡಿದವು.ಅಲ್ಲಿಯೂ ವರುಣನ ಆರ್ಭಟ ಜೋರಾಗಿಯೇ ಇತ್ತು.ತಮ್ಮನನ್ನು ಕಾಲೇಜಿಗೆ ಬಿಡಲು ಹೋಗ್ಗಿದ್ದ ನಾವು,ಕೆಲಸ ಮುಗಿಸಿ ಹೊರಡಲು ಸಿದ್ಧರಾದೆವು.ಜೈನ ಬಸದಿ ನೋಡಿ ಹೊರೆಟೆವು.ಅದೆಂತ ಸುಂದರ ಬಸದಿ,ಕರ್ನಾಟಕದ ಹೆಮ್ಮೆ!
     ಬಂದ ದಾರಿ ದೂರಾಯೆತೆಂದು,ಮಾರ್ಗ ಬದಲಿಸಿ ಚಾರ್ಮುಡಿ ದಾರಿ ಹಿಡಿದೆವು.ಇಲ್ಲಿಂದ ಶುರುವಾಯಿತು ನಮ್ಮ ಭಯಾನಕ ಅತ್ಯದ್ಭುತ ಪಯಣ.ನಾವು ಮೂಡಬಿದಿರೆ ಬಿಟ್ಟಾಗಲೆ ಗಂಟೆ ಆರಾಗಿತ್ತು.ಚಾರ್ಮುಡಿ ಏರಿದಾಗ ಸಮಯ 8/8.30  ಸಮೀಪಿಸಿತ್ತು.ಅದು ಕಗ್ಗತ್ತಲು,ನೀರವ ಮೌನವನ್ನು ಸೀಳಿಕೊಂಡು ಬರುತಿತ್ತು ಹುಳಗಳ ಜೇಂಕಾರ.ರಾತ್ರಿಯಾದ್ದರಿಂದ ವಾಹನಗಳ ಸಂಚಾರ ಅಷ್ಟಿಲ್ಲದಿದ್ದರೂ,ಗೂಡ್ಸ್ ಹೊತ್ತ ಲಾರಿಗಳಿಗೇನು ಕೊರತೆಯಿರಲಿಲ್ಲ.ಜೇಷ್ಠ ಮಾಸದ ಜಿಟಿ-ಜಿಟಿ ಮಳೆ,ಸುಯ್ಯೆಂಬ ಸುಳಿಗಾಳಿ, ಚಾರ್ಮುಡಿಯ ನೀರವ ಮೌನ,ದಾರಿಯೇ ಕಾಣದಂತೆ ಮುಸುಕಿರುವ ಕಾವಳದ ನಡುವೆ ಸಾಗಿತ್ತು ನಮ್ಮ ಬದುಕಿನ ತೇರು.ಕೈಯಲ್ಲಿ ಜೀವ ಹಿಡಿದು ಕುಳಿತಿದ್ದೆ ನಾನು,ಮುಂದೆ ದಾರಿಯೆ ಕಾಣದ ಪಥದಲ್ಲಿ ಸರಿ ದಾರಿ (ಸುರಕ್ಷಿತ ದಾರಿ) ಹುಡುಕುವ ಪ್ರಯತ್ನ ನಮ್ಮದು.ಆ ಕ್ಷಣವೇ ಹೊಳೆದ ಆಲೋಚನೆ, ಇದೇ ಜೀವನವಲ್ಲವೇ?
    ಮುಂದೆ ಹೋಗುತ್ತಿದ್ದಂತ್ತೆ ಮನಸ್ಸಿನ ತಳಮಳ ಹೆಚ್ಚಾಯಿತು, ಇಲ್ಲಿಂದ ಸುರಕ್ಷಿತವಾಗಿ ಹೋದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸಿದೆ.ಆಗ ಧುತ್ತೆಂದು ಒಬ್ಬ ಮನುಷ್ಯ ಕಾಣಿಸಿದ,ಆ ಕಗ್ಗತ್ತಲ ರಾತ್ರಿ, ಭಯಾನಕ ಚಾರ್ಮುಡಿಯಲ್ಲಿ ಎಲ್ಲಿಗೇ ಹೋಗುತ್ತಿರುವ ಈತನೆಂದು ಯೋಚಿಸಿದೆ. ಆತ ವಯಸ್ಸಾದ ಅಜ್ಜ,ಊರುಗೋಲು ಹಿಡಿದ ಹಿರಿತಲೆ,ಜಿನುಗುತ್ತಿರುವ ಮಳೆಯಲ್ಲಿ ಪ್ಲಾಸ್ಟಿಕ್ ಶೀಟ್ ತಲೆಯ ಮೇಲೆ ಹೊದ್ದುಕೊಂಡು ಜೀವನದಲ್ಲಿ ಏನನ್ನೋ ಅರಸಿ ಹೊರಟಿರುವ ಅವರನ್ನು ಕಂಡು ಒಮ್ಮೆ ಜೀವ ಕಂಪಿಸಿತು(horror movie effect).ಆದರೇ ಅಜ್ಜ ಹೊರಗಿನ ಪ್ರಪಂಚದ ಗೊಡವೆಗೆ ತಲೆ ಕೆಡಿಸಿಕೊಳ್ಳದೆ ತನ್ನ ದಾರಿಯಲ್ಲಿ ನಡೆದಿದ್ದ. 
     ಹೀಗೆ ಚಾರ್ಮುಡಿಯ ತಿರುವು-ಮುರುವುಗಳಲ್ಲಿ  ನಮ್ಮ ಪ್ರಯಾಣ ಸಾಗಿತ್ತು. ಕೊನೆಗೂ ,ಚಾರ್ಮುಡಿ ಇಳಿದು ಕೊಟ್ಟಿಗೆಹಾರ ತಲುಪಿದಾಗ ಜೀವ ನಿಟ್ಟುಸಿರು ಬಿಟ್ಟಿತು.
ಅಂತು ನಮ್ಮ ಚಾರ್ಮುಡಿಯ ಅನುಭವ ಅತ್ಯದ್ಭುತ!
       ‌           ‌        
        ‌           

/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನ...