Thursday, 9 July 2020

/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನನ್ನ ಮೇಲೆ ಹಾಸ್ಟೆಲ್ ಮತ್ತು ಪಿಜಿ ಪ್ರಭಾವ ಇಲ್ಲ ಅಂದ್ರೆ ತಪ್ಪಾಗುತ್ತೆ.ಆ ಜಾದುಗಾತಿ ಏನೋ ಪಲ್ಯದನ್ನ ಕಲ್ಸಿ ...ಬಿರ್ಯಾನಿ ಇದು ಅಂದ್ರು, ಸರಿ ಚೆನ್ನಾಗಿದೆ ಅಂತ ತಿನ್ನೋವಷ್ಟು ಹೊರಗಿನ ಆಹಾರ ನನ್ನ ಬಾಯಿ ಕೆಡ್ಸಿದೆ.ಪಿಜಿಯಲ್ಲಿ ಅನ್ನಕ್ಕೆ, ಆ ಸಪ್ಪೆ ದಾಲ್ ಕಲ್ಸಿ ಹೊಟ್ಟೆಗೆ ಇಳ್ಸೋ ಜವಬ್ದಾರಿನ...ಅಮ್ಮ, ಅವಳು ಹಾಕಿರೋ ಮಾವಿನಕಾಯಿ ಮಿಡಿ ಉಪ್ಪಿನಕಾಯಿಗೆ ಹಾಗೂ ಶೇಂಗಾ ಚಟ್ಣಿಪುಡಿಗೆ ವಹಿಸಿರ್ತಾಳೆ.ಆ ಒಣಗೋಗಿರೋ ಚಪಾತಿ, ಬೇರೆ ತರಕಾರಿನೇ ಕಂಡಿಲ್ದೆ ಇರೋ ಆಲೂ ಕರಿ  ನೋಡಿ ಊಟವೇ ಬೇಡೆನಿಸಿದಾಗ...ಈ ಪುಣ್ಯಾತ್ಗಿತ್ತಿ ಮಾಡಿ ಕಳ್ಸಿರೋ ಪುಳಿಯೋಗರೆ ಗೊಜ್ಜು ಮೈಲಿ ದೂರವಿರೋ ಮನೆಗೆ ಮತ್ತು ಮನೆಯಲ್ಲಿರೋ ಅವ್ಳತ್ರನೇ ಹೋದಂತೆ ಪುಳಕಿತಗೊಳ್ಸೋದಂತು ನಿಜ. .

ತಲೆನೋವು ಬಂದು ಅಲ್ಲೇ ಹೋಟೇಲ್ನಲ್ಲಿ ಬ್ರೂ ಹಾಕಿರೋ ಇನ್ಸಟಂಟ್ ಕಾಫಿನೋ ಅಥವಾ ಕಾಫಿಯ ಹದವೇ ತಿಳಿಯದವನೊಬ್ಬ ಡಿಕಾಕ್ಶನ್ಗೆ ಹಾಲಂತ ನೀರನ್ನು ಕದಡಿ ಕೊಟ್ಟದನ್ನ ಕುಡಿಯುವ ಮನಸ್ಸು, " ಅಮ್ಮಾ....ಒಂದ್ ಸ್ಟ್ರಾಂಗ್ ಫಿಲ್ಟರ್ ಕಾಪಿ" ಅಂತ ಚೀರಾಡ್ತಿರತ್ತೆ. .

ಮನೆಯಿಂದ ಹೊರಡುವಾಗ ಅವಲಕ್ಕಿ ಚೂಡ, ಮಂಡಕ್ಕಿ ಒಗ್ಗರಣೆ ಅಂತ ಅಮ್ಮ ತುಂಬಿಕೊಡುತ್ತಿರುವಾಗ..ಹೊತ್ತ್ಕೊಂಡು ಬಸ್ಸಿನಲ್ಲಿ ಹೋಗೋದಕ್ಕೆ ಆಗಲ್ಲಾ ಅಂತ ಸ್ವಲ್ಪ ಜೋರಾಗೇ ಹೇಳಿದರು ಹಟಬಿಡದೆ ಇನ್ನೂ ಎರಡು ಹೆಚ್ಚಿಗೆ ತಿಂಡಿ ತುಂಬಿಸಿ..."ನೋಡು ಬೇಕಿದ್ರೆ ಆಫೀಸ್ಸು ಮುಗ್ಸಿಬಂದು ಸಂಜೆ ಒಂದಿಷ್ಟು ಬಾಯಾಡ್ಸಿದ ಮೇಲೆ ನನ್ನ ನೆನಪಿಸಿಕೊಳ್ಳುತ್ತೀಯ with a smile on your face"  ಅಂತ ಹೇಳ್ಬಿಡ್ತಾಳೆ.ಅದು ನಿಜವೇ ಅನ್ಸೋದು ಆ ಮಾಯನಗರಿಯ ಜನಜಂಗುಳಿಯಲ್ಲಿ ಬಳಲಿ, ಆಫೀಸ್ ಕೆಲಸ ಎಂಬ ಬಿಸಿ ಎಣ್ಣೆಯಲ್ಲಿ ಕರಿದು ಕರಿದು ಸೀದಂತಾದ ಜೀವ ನಿರ್ಲಿಪ್ತ ಸಂಜೆಗಳಲ್ಲಿ ಈ ತಿಂಡಿಗಳ ತಡುಕಾಡಿ ಒಂದ್ ಹಿಡಿ ಹೊಟ್ಟೆಗಿಳಿಸಿ ಅಮ್ಮನ ಆ ಮಾತು ನೆನದಾಗ ಮುಗುಳ್ನಗೆಯೊಂದು ನಗರದ ಸಿಗ್ನಲ್ಗಳಿಗೂ ಕಾಯದೆ ಮಿಂಚಿ ಮರೆಯಾದಾಗ...... .

ಇಷ್ಟಿದ್ದರೂ ಯಾವಾಗಲೋ ಮನೆಗೆ ಬಂದಾಗ ಏನ್ ಮಾಡಿಕೊಡ್ಲೆ ಮಗು ಅಂತ ಕೇಳಿದಾಗ...ನಾನು ಹಲ್ಲು ಗಿಂಜಿಕೊಂಡು ಹೇಳೋದು ಅದೊಂದನ್ನೇ.." ಅನ್ನ ತಿಳೀ ಸಾರು".ಎರಡು ಕೆಂಪು ಮೆಣಸು ಮುರಿದು, ಒಂದಿಷ್ಟು ಇಂಗು ಒಗ್ಗರಿಸಿ ...ಅವಳ ಮಾಡೋ ಸಾರಿನ ಘಮದಲ್ಲೇ ನೆಮ್ಮದಿ ಕಾಣೋ ಈ ಜೀವ...
ಅದನ್ನೇ ಅಮೃತವೆಂಬಂತೆ ಮತ್ತೆ ಮತ್ತೆ ಕುಡಿದು ಮುಗಿಸುವ ನನ್ನ ನೋಡಿ ನೆಮ್ಮದಿ ಕಾಣುತ್ತೆ ಆ ಜೀವ... .

ಕಾಣದೂರಲ್ಲಿ ನನ್ನ ಮಗು ಅದೇನು ತಿಂದಿದ್ಯೋ, ಹಸ್ಕೊಂಡಿದ್ಯೋ... ಅನ್ನೋ ಯೋಚನೆಯಲ್ಲಿ ತಾನು ತಿನ್ನೋ ತುತ್ತನ್ನೂ ಕಷ್ಟಪಟ್ಟು ಅರಗಿಸ್ಕೊಳ್ಳೋ ಆ ಜೀವಕ್ಕೆ ಒಂದು ಸಲಾಂ......


Tuesday, 11 February 2020

ಕಡಲಿಗೊಂದು ಪ್ರೇಮ ಪತ್ರ

ಪ್ರಿಯ ಕಡಲೇ,

ಶಶಿಯ ಪೌರ್ಣಮಿಯಂದು ತನ್ನೆಲ್ಲಾ ಉದ್ವೇಗವ ಹೊರಹಾಕುವ ನೀನು, ನನ್ನೆಲ್ಲ ಭಯ ಹತಾಶೆಯ ನಿನ್ನೊಡಲಲ್ಲಿ ಮುಳುಗಿಸಲು ಸದಾ ಸಂಗಾತಿಯಂತೆ ಹೆಗಲು ಕೊಡುವ ಹಮ್ಮೀರ. ಹೆಣೆದುಕೊಂಡ ಸುಂದರ ಸುಳ್ಳಗಳ ಸರಮಾಲೆಯ... ಸರಣಿಯಂತೆ ನಿನ್ನಲ್ಲಿ ಬಿಚ್ಚಿಡುವಾಗ, ಬದುಕಿನ ತೀವ್ರ ಪ್ರೀತಿಗೆ ತಿರುಗಿ ಬಿದ್ದ ಹಾಗೆ ಮೌನವಾಗಿ ಆಲಿಸುವ ನೀ.. ನೆನಪಿನ ಬುತ್ತಿಯಲ್ಲಿ ಹುಡುಕಲ್ಪಡುವ ಮೊದಲಿಗ!!! ಹೇಳದೆ ಕೇಳದೆ ಹಟವಿಡುತ್ತಿದ್ದ ಹೊಂಗನಸುಗಳಿಗೆ ನಿನ್ನ ಕನವರಿಕೆಯಂತೆ!!
ನಾ ಬರುವನೆಂಬ ವರದಿ ಹೊತ್ತು ತಂದ ನಿನ್ನಾ ಅಲೆಗಳಿಗೆ ಎದೆಬಡಿತ ಹೆಚ್ಚಾದರೆ ನಾ ಅಪರಾಧಿಯಲ್ಲ.

ಇಂತಿ ನಿನ್ಗುಂಗಲ್ಲೆ,
ನಿನ್ನವಳು.


Thursday, 10 October 2019

ಕನಸುಗಳ ಬೆನ್ನನ್ನೇರಿ

ಹೆಸರು:     ಚಲನಾ
ವಯಸ್ಸು:  21
ತಂದೆ:       ವಾಸುದೇವರಾವ್
ತಾಯಿ:     ವತ್ಸಲಾ
ಊರು:     ಜಂಗಮದುರ್ಗ
ಡಿಗ್ರಿ:         ಬಿಎಸ್ಸಿ( ಸಿಬಿಝೆಡ್)
ಕೆಲಸ:       ರಿಸೆಪ್ಶನಿಸ್ಟ್ ಟ್ರಾವೆಲರ್ಸ್ ಬುಕ್ಕಿಂಗ್      ಕಂಪನಿಯಲ್ಲಿ(ಬೆಂಗಳೂರು)


ಚಲನಾಳ ಬಯೋಡೇಟಾ ಮತ್ತು ಫೋಟೋ ನೋಡಿದ ಗಂಡಿನ ಮನೆಯವರು ಚಕಾರವೆತ್ತದೆ ಹೂ ಎಂದಿದ್ದರು. ಇನ್ನೇನು ಹುಡುಗಿ ನೋಡೋ ಕಾರ್ಯಕ್ರಮ ಮುಗಿಸೋಣ, ನಮ್ಮ ಮಗನಿಗೆ ಗುರು ಬಲ ಕೂಡಿ ಬಂದಿದೆ ಎಂದು ಲೆಕ್ಕಾಹಾಕ್ಕಿದ್ದರು ಹುಡುಗನ ಮನೆಯವರು.
********************************************

ಚಲನಾ ಮಧ್ಯಮ ವರ್ಗದ ಮನೆಯ ಹೆಣ್ಣುಮಗು, ತಾನು ಬಯಸಿದ್ದೆಲ್ಲ ಕಾಲ ಕೆಳಗೆ ಬಂದು ಬೀಳದಿದ್ದರು, ಆಕೆಗೇನು ಕಡಿಮೆ ಮಾಡಿರಲಿಲ್ಲ ವಾಸುದೇವರಾಯರು. ಮಗಳನ್ನು ಕಣ್ರೆಪ್ಪೆಯಲ್ಲಿಟ್ಟುಕೊಂಡು ಸಾಕಿದ್ದರು. ಚಲನಾ ಕೂಡ ಚಟಪಟ ಮಾತಾಡುವ ಚುರುಕು ಹುಡುಗಿ. ವತ್ಸಲಾರವರಿಗೆ ಇವಳೆ ಪ್ರಪಂಚ. ಆದರೆ ಈ ಕುಟುಂಬಕ್ಕೆ ಒಂದೇ ಚಿಂತೆ ಚಲನಾಳ ಚಿತ್ರ ವಿಚಿತ್ರದ ಕನಸುಗಳದ್ದು. ಊಹೂ ಅವಳ ಜೀವನದ  ಕನಸುಗಳಲ್ಲ,, ಕಾರಿರುಳ ಸ್ವಪ್ನಗಳು. 

ಹಾ!!..ಚಲನಾಳಿಗೊಂದು ಅಭ್ಯಾಸ ರಾತ್ರಿ ನಿದ್ದೆಯಲ್ಲಿ ಮಾತಾಡುವುದು, ಕಿಟಾರನೆ ಕಿರುಚುವುದು. ಕನಸುಗಳಲ್ಲಿನ  ಮಾತುಕತೆ ಕನವರಿಕೆಯಾಗಿ ಹೊರಬರುತ್ತಿತ್ತು.ಈಕೆಗೆ ದಾರಿಯಲ್ಲಿ ಕಂಡ ಅಪರಿಚಿತ ಯುವತಿ, ಬಿಎಂಟಿಸಿಯ ಕಂಡಕ್ಟರ್, ಎಷ್ಟೋ ವರ್ಷದ ಹಳೆಯ ಸಹಪಾಠಿ, ಪಾರ್ಕ್ ನಲ್ಲಿ ಆಡುತ್ತಿದ್ದ ಮಗು ಎಲ್ಲರೂ ಮತ್ತೊಮ್ಮೆ ಕನಸಿನಲ್ಲಿ ಭೇಟಿ ಮಾಡುತ್ತಾರೆ.ಕಂಡ ಕನಸುಗಳಲ್ಲಿ ಮೇಲು ಕೀಳೆಂಬ ಭೇದವಿಲ್ಲ, ಕಿರಿಯ ಹಿರಿಯನೆಂಬ ತಾರತಮ್ಯವಿಲ್ಲ.ಈಕೆಯ ಕನಸಿನಲ್ಲಿ, ಇವಳ ಮ್ಯಾನೇಜರ್ ಇವಳು ಕಂಡ ಭಿಕ್ಷುಕನಿಗೆ ಸ್ನೇಹಿತ, ಪಾರ್ಕಿನ ಚಿಕ್ಕ ಮಗು ಮತ್ಯಾವುದೋ ನಿಜ ಜೀವನದ ಪಾತ್ರದ ಮಗು..ಹೀಗೆ ಸಾಗಿತ್ತು ಚಲನಾಳ ಜೀವನ ಕನಸುಗಳ ಬೆನ್ನನ್ನೇರಿ.





ವಿಜ್ಞಾನದ ಪ್ರಕಾರ ಕನಸುಗಳು ನೆನಪಿನಲ್ಲುಳಿಯುವುದು ಬಹಳ ವಿರಳ. ಆದರೆ ಈಕೆಗ ಪ್ರತಿ ಕನಸು ಸ್ಮೃತಿ ಪಟಲದಲ್ಲಿ ಅಚ್ಚಾಗಿರುತ್ತಿತ್ತು ಮತ್ತು ಅದನ್ನು ಯಾರಿಗಾದರು ಹೇಳಬೇಕೆನ್ನುವ ತವಕ. 
ಚಲನಾ ಕಾಲೇಜಿನಲ್ಲಿರುವಾಗ ಈಕೆಗೊಂದು ಕನಸು, ಆಕೆಯ ಕಾಲೇಜಿನ ಅಡ್ಮನ್ ಬ್ಲಾಕಿನಿಂದ ದೈತ್ಯಾಕಾರದ ಬಣ್ಣ ಬಣ್ಣದ ಇರುವೆಗಳು ಕೆಳಗಿಳಿದು ಬರುವಂತೆ.ಮತ್ತೊಮ್ಮೆ ತನಗೆ ಬಾಲ್ಯ ವಿವಾಹವಾದಂತೆ. ಇನ್ನೊಮ್ಮೆ ಕಪ್ಪೆಯೊಂದು ಕಚ್ಚಿದಂತೆ, ಮಗದೊಮ್ಮೆ ಜೇನೊಂದು ಚುಚ್ಚಿದಂತೆ. ತಲೆಯೊಳಗೆ ಚಿತ್ರ ವಿಚಿತ್ರ ಕತೆಗಳ ಸಿಡಿ ಪ್ಲೇ ಮಾಡಿಕೊಂಡು ಮಲ್ಗತಿದ್ದಳೇನೊ ಚಲನಾ ಎಂಬ ಅನುಮಾನ ಬರದೇ ಇರುತ್ತರಲಿಲ್ಲ ಇವಳ ಕನಸುಗಳ ಆಲಿಸುವರಲ್ಲಿ.
******************************************* 

ಚಲನಾಳ ಅಗ್ನಿ ಪರೀಕ್ಷೆ ದಿನ, ತನ್ನ ನೋಡಲು ಗಂಡಿನ ಮನೆಯವರು ಬರ್ತಾರೆ ಅಂತ ಅಮ್ಮ ಹೇಳಿದಾಗಲಿಂದ ಇವಳ ಚಡಪಡಿಕೆ. ತನ್ನ ಕನಸಿನ ಭೂತವನ್ನ ಮನೆಯವರು ಲೆಕ್ಕಿಸದಿದ್ದರೂ, ಮದುವೆಯಾಗುವವನಿಗೆ ಇದೆಲ್ಲ ಹೇಳದಿದ್ದರೆ ದ್ರೋಹ ಮಾಡಿದಂತೆ ಎಂದು ನಂಬಿದ್ದಳು.
ಬಂದವರಿಗೆಲ್ಲ ಕಾಫಿ ಕೊಡಲು ಬಂದ ಚಲನಾಳ ಮನಸ್ಸೆಲ್ಲಾ ತನ್ನ ಕನಸುಗಳಲ್ಲಿ ಹೂತೋಗಿತ್ತು.ಇದೇ ಗುಂಗಲ್ಲಿದ್ದ ಆಕೆ ತನ್ನ ನೋಡಲು ಬಂದಿರುವ ಹುಡುಗ ಏನು ಕೆಲಸ ಮಾಡುತ್ತಾನೆ ಎಂದು ಕೇಳಿಲ್ಲವೆಂದು ಅರಿವಾದದ್ದು ಆತನ  ಸ್ಥೆತಾಸ್ಕೋಪ್ ನೋಡಿದ ಮೇಲೆಯೇ!!!

ನನಗೆ ಹುಡುಗಿಯೊಂದಿಗೆ ಮಾತಾಡಲು ಅವಕಾಶ ಮಾಡಿಕೊಡಿ ಎಂದು ಸಮರ್ಥ್ ಮುಂದೆ ಬಂದಿದ್ದ. ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿದಬೇಕೆಂದುಕೊಂಡ ಚಲನಾ ಎಲ್ಲವನ್ನೂ ಹೇಳಿಯೇಬಿಡುವುದೆಂದು ನಿರ್ಧರಿಸಿದಳು.

ಸಮರ್ಥ್: ಹಾಯ್
ಚಲನಾ: ಹೆಲೋ
ಸ: ಮೇ ಐ ನೋ ಮೋರ್ ಅಬೋಟ್ ಯು?
ಚ: ಯಾ, ಅಫ್ಕೋರ್ಸ್!! ಐ ಆಮ್ ವರ್ಕಿಂಗ್ ಆಸ್ ಆ ರಿಸೆಪ್ಶಿನಿಸ್ಟ್ ಇನ್ ಆ ಟ್ರಾವೆಲ್ಲಿಂಗ್ ಏಜನ್ಸಿ.
ನನಗೆ ಕನಸುಗಳ ಖಾಯಿಲೆಯಿದೆ, ಇಂದಿನ ಕನಸಿನಲ್ಲಿ ನೀವು ಬಂದರು ಆಶ್ಚರ್ಯವೆನಿಲ್ಲ.
( ಮನೋವೈದ್ಯನಾದ ಸಮರ್ಥನಿಗೆ, ಅದು ಕನಸುಗಳ ಬಗ್ಗೆ ರಿಸರ್ಚ್ ಪೇಪರ್ ತಯಾರಿಸುತ್ತಿದ್ದ...ಹೆಂಡತಿಯ ಜೊತೆ ಒಂದು ಕೇಸ್ ಸ್ಟಡಿ ಕೇಸ್ ಕೂಡ ಸಿಗ್ತೂ ಅನ್ನೋ ಸಂಭ್ರಮ) 
ಸಮರ್ಥ, ನೈಸ್ ಟು ಹಿಯರ್...ನಾನೊಬ್ಬ ಮನೋವೈದ್ಯನೆಂದಾಗ ತಬ್ಬಿಬ್ಬಾದಳು ಚಲನಾ. ನಾನು ವಿಚಿತ್ರನೆಂದರೆ ಇವ್ನಿಗ್ಯಾಕೆ ಖುಷಿ.🙄🙄
ಸ: ಕ್ಯನ್ಯೂ ಪ್ಲೀಸ್ ಎಕ್ಸ್ಪ್ಲೇನ್ ಮಿ ಅಬೋಟ್ ಯುವರ್ ಡ್ರೀಮ್ಸ್
ಚಲನಾ ತನ್ನೆಲ್ಲಾ ಕನಸುಗಳ(ಇರುವೆ, ಕಪ್ಪೆಯಿಂದ  ಹಿಡಿದು ಮಹಿಷಾಸುರನ ನರಸಿಂಹನ ಕನಸುಗಳ ತನಕ) ಚಾಚುತಪ್ಪದೆ ಹೇಳಿದಳು.
ಸಮರ್ಥ ನಗುತ್ತಾ  ಅವಳ ಅನುಮಾನಗಳಿಗೆ ಉತ್ತರಿಸಿದಾ "ಎಂತಾ ಮರಾಯ್ತಿ ಇದು ಖಾಯಿಲೆಯಲ್ಲ. ಕನಸಗಳು
 ಸುಪ್ತ ಮನಸ್ಸಿನ ಸಂವೇದನೆ.ವೈಜ್ಞಾನಿಕವಾಗಿ ಹೇಳುವುದಾದರೆ  ನಿದ್ರೆಯಲ್ಲಿ ನಮ್ಮ ದೈನಂದಿನ ಜೀವನದಲ್ಲಿ ನೆಡೆದ ಘಟನೆಗಳ ಕಲೆಹಾಕುವಿಕೆ. ಇನ್ನೂ ಒಂದು ಮೂಲದ ಪ್ರಕಾರ - interpreting random signals from the brain and body during sleep. ಅಂದರೆ ಮಿದುಳು ಯಾವುದೋ ಗೊತ್ತುಗುರಿಯಿಲ್ಲದ ಸೂಚನೆಗಳ ಪರಾಮರ್ಶಿಸಿವುದು, ಅವು ನಮಗೆ ದೃಶ್ಯ ರೂಪಕದಂತೆ ನಿದ್ರೆಯಲ್ಲಿ ಕಾಡುತ್ತವೆ."

ಹಾಗದರೆ ಆ ಇರುವೆಗೇನು ನನ್ನ ಮೆದುಳಲ್ಲಿ ಜಾಗ ಎಂದಳು ಸಣ್ಣ ಮಗುವಂತೆ.
 ಸ: ನೀನು ಇರುವೆಗಳ ತುಂಬಾ ಸಮೀಪದಿಂದ ನೋಡಿರುತ್ತೀಯ. ಅದಲ್ಲದೆ antman ಎಂಬ ಕ್ಯಾರೆಕ್ಟರ್ ಬಗ್ಗೆ ಸುಪ್ತ ಮನಸ್ಸಿನಲೆಲ್ಲೋ ಉಳಿದಿರುತ್ತದೆ. ಇವೇ ನಿನಗೆ ಬಣ್ಣ ಬಣ್ಣದ ಹೊದಿಕೆ ಹೊದ್ದು ಕನಸುಗಳಂತೆ ಉರುಳಿವೆ ...ಹೆದರಬೇಡ!!!
ಇನ್ನೂ ಪಾರ್ಕಿನಲ್ಲಿ ನೋಡಿದ ಮಗು ನಿನಗೆ ತುಂಬಾ ಹತ್ತರವಾಗಿರುತ್ತೆ, ಬಸ್ಸಿನ ಕಂಡಕ್ಟರ್ ಅಂಕಲ್ ಆತ್ಮೀಯರು...ಸಬ್ ಕಾನ್ಶಿಯಸ್ ಮೈಂಡ್ ನಲ್ಲೆಲ್ಲೋ ದೊಡ್ಡ ಜಾಗವನ್ನೆ ಪಡೆದಿರುತ್ತಾರೆ ನೀನರಿಯದಂತೆ.

ಇದನ್ನೆಲ್ಲಾ ಬಹಳಾ ಸಹನೆಯಿಂದ ಅರ್ಥ ಮಾಡಿಸಿದ ಸಮರ್ಥ, ಸುಪ್ತ ಮನಸ್ದಿನೊಳಗೆ  30×40 ಸೈಟು ಖರೀದಿಸಿ ಪಾಯ ತೋಡಿದ್ದ.ಕನಸುಗಳ ಅಂತರಾಳವರಿತ ಚಲನಾಳ ಮನಸ್ಸು ನಿರಾಳವಾಗಿತ್ತು.
ಸಮರ್ಥ ಕೇಳಿಯೇ ಬಿಟ್ಟ, ಬಾಳಿಗೊಂದು ಸಂಗಾತಿ ಮತ್ತು ವೃತ್ತಿಗೊಂದು ಕೇಸ್ ಆಗುವೆಯಾ ಚಲನಾ ಎಂದು.😎
ನಮ್ಮ ಮದುವೆಗೆ 'ಕನಸುಗಳ ಬೆನ್ನನ್ನೇರಿ' ಎಂಬ ವೆಲಕಮ್ ಬೋರ್ಡ್ ಹಾಕ್ಸೋಣ ಅಂದ್ಲು ಚಲನಾ.

ಮರುದಿನ ಬೆಳಗ್ಗೆ:
(ಸಮರ್ಥನಿಗೆ ಅವಸರದಲ್ಲಿ ಫೋನಾಯಿಸಿದಳು ಎದ್ದ ಕೂಡಲೆ)
ಚ: ಸಮರ್ಥ್ ನಿನ್ನೆ ರಾತ್ರಿ ನನ್ನ ಕನಸಲ್ಲಿ ನಿಮ್ಮ ಕಸಿನ್ ಸಿದ್ದಾರ್ಥ್ ಬಂದಿದ್ದರು, ಅದೇ ನಿನ್ನೆ ನಮ್ಮನೆಗೆ ನಿಮ್ಮ ಜೊತೆ ಬಂದಿದ್ರಲಾ ಅವರು, ಪಾರ್ಕಿನಲ್ಲಿರುವಂತೆ ಕನಸು 
ಸ: (ಕಾಲೆಳೆಯುತ್ತಾ)
ಏಯ್ ಕಳ್ಳಿ, ನನ್ನ ಬದಲು ಅವನಿಗೆ ಲೈನ್ ಹೊಡಿತಿದ್ಯಾ ನಿನ್ನೆ, ಅದ್ಕೆ ನಿನ್ನ ಸುಪ್ತ ಮನಸ್ಸಿನಿಂದ ಆ ಕನಸು ಬಂದಿದೆ.
(ಇಬ್ಬರು ಗಹಗಹಿಸಿ ನಗುತ್ತಾ)
ಸ: ಇಷ್ಟೇ ನೋಡು ಕನಸಿನ ಮರ್ಮ.😂






Monday, 1 October 2018

ಕಾಫಿ ತವರು- ಚಿಕ್ಕಮಗಳೂರು

ಕಾಫಿ ತವರು- ಚಿಕ್ಕಮಗಳೂರು

ಅಂತರಾಷ್ಟ್ರೀಯ ಕಾಫಿ ದಿನದಂದು, ಆ ಊರು ಎಡಬಿಡದೆ ಕಾಡುತ್ತಿದೆ. ಕಾಫಿನಾಡು ಎಂದೇ ಪ್ರಸಿದ್ಧಿ ಹೊಂದಿರುವ ಚಿಕ್ಕಮಗಳೂರಲ್ಲಿ, ಸ್ವಲ್ಪ ವರ್ಷ ಕಾಲ ಕಳೆದೋಳು ನಾನು ಎನ್ನುವುದೇ ಖುಷಿ.
     ಎಂದಿನಂತೆ ಫೇಸ್‌ಬುಕ್‌, ವಾಟ್ಸ್ ಅಪ್, ಇನ್ಸ್ಟಾಗ್ರಾಮ್ ಜಾಲಾಡುತ್ತಿದ್ದೆ, ಎಲ್ಲರ ಸ್ಟೇಟಸ್ನಲ್ಲೂ #InternationalCoffeeDay ಪೋಸ್ಟ್ಸ್ ಇತ್ತು. ಅದನ್ನೆಲ್ಲಾ ನೋಡ್ತಾ ನನ್ನ ಮನಸ್ಸು ಅದಾಗಲೇ ಚಿಕ್ಕಮಗಳೂರಿಗೆ ಜಿಗಿದಿತ್ತು. ಅಲ್ಲಿ ನಾನು ಕಳೆದದ್ದು 4 ವರ್ಷಗಳಾದರು, ನಾನೂರು ನೆನಪು ಅಚ್ಚಳಿಯದೆ ಬೇರೂರಿದೆ. ಎಡಬಿಡದೆ  ಹೊಯ್ಯುವ ಮಳೆರಾಯ, ಸುಂದರ ಪ್ರಕೃತಿ, ಬಿಸಿ ಬಿಸಿ ಕಾಫಿ...ಸ್ವರ್ಗ ಪಕ್ಕದಲ್ಲೇ ಇದ್ದಂತಹ ದಿನಗಳವು. ನಾನು ಹಾಸ್ಟೆಲ್ನಲ್ಲಿದ್ದ ಕಾರಣ, ನಮ್ಮ ಹಾಸ್ಟೆಲ್ ಕಾಫಿ ಬಗ್ಗೆ ಹೇಳಲೇಬೇಕು. ಅಲ್ಲಿನ ಅಡುಗೆ ಭಟ್ಟರು ಮಾಡುತ್ತಿದ ಕಾಫಿ ಅಮೃತ.
ದಿನವೂ ಬೆಳಿಗ್ಗೆ ಬೇಗನೆ ಕಾಲೇಜಿನ ಕ್ಲಾಸ್ ಆರಂಭವಾಗುತ್ತಿದ್ದರಿಂದ, ಆ ಚಳಿಗೆ ಕಾಫಿ ಬೇಕೇಬೇಕು. ಒಂದು ಪಕ್ಷ ತಿಂಡಿ ಇಲ್ಲದಿದ್ದರೂ ನೆ
ಡೆಯುತ್ತಿದ್ದ ಈ ಜೀವ, ಕಾಫಿಯಿಲ್ಲದೇ ಊಹೂ  ಒಂದು ಹೆಜ್ಜೆ ಕೂಡ ಮುಂದಿಡುವ ಮಾತಿಲ್ಲ. ಒಂದಂತೂ ನಿಜ ಚಿಕ್ಕಮಗಳೂರಿನ ಹಾಸ್ಟೆಲ್ ಕಾಫಿಗೆ ಯಾವ ಸರಿಸಾಟಿಯೂ ಇಲ್ಲ. ಕಳೆದುಹೋದ ಆ ದಿನಗಳ ನೆನಪು ಅಮರ...
     ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿವ ಮಳೆ, ಅಂದು ಕಾಫಿ ಹೀರುತ್ತಾ ಓದಿದ ಪುಸ್ತಕ, ನೋಡಿದ ಸಿನಿಮಾ, ಓಡಾಡಿದ ಬೀದಿ ಎಲ್ಲಾ ಕಾಡುವಂತೆ ಮಾಡಿದೆ. ಈಗಲೂ ಕಾಫಿ ಹಿಡಿದು ಕೂತರೆ ಕಡಲ ಭೋರ್ಗರೆತದಂತ ಯೋಚನೆಗಳು, ದ್ವಂದ್ವದ ಚೀರಾಟ, ಮನಸ್ಸಿನ ದುಗುಡವೆಲ್ಲಾ ಹಾರಿಹೋದಂತೆನಿಸುತ್ತದೆ. 
     ಕೆಲವು ಭಾವನೆಗಳನ್ನ ಅಕ್ಷರ ರೂಪಕ್ಕೆ  ಇಳಿಸೋದು ಕಷ್ಟ.ಬಿತ್ತರಿಸಿದಷ್ಟು ವಿಸ್ತಾರವಾಗುವ ಅಂತಹ ಭಾವದ ತುಣಕೊಂದನ್ನು ಮಾತ್ರ ಇಲ್ಲಿ ಬರೆದಿರೋದು.
#ವಿಶ್ವಕಾಫಿದಿನ

Friday, 27 April 2018

ಆತ್ಮಾವಲೋಕನ

ಆತ್ಮಾವಲೋಕನ

ಬದುಕಿನಲ್ಲಿ ಬಂದದ್ದನ್ನು  ಬಂದಂತೆಯೇ ಸ್ವೀಕರಿಸುವ ರೀತಿ ನನ್ನದು.ಯಾಕೋ ವಿಚಾರಗಳು ಮನಸಲ್ಲಿ ಗೊಂದಲವನ್ನು ಮೂಡಿಸಿ , ಅತಿ ಎನಿಸುವಷ್ಟು ಗಾಬರಿಯನ್ನು ಹುಟ್ಟುಹಾಕುತ್ತವೆ. ಒಮ್ಮೊಮ್ಮೆ ಸೂಕ್ಷ್ಮ ವಿಚಾರಧಾರೆಗಳು  ಎದೆಯಲ್ಲೊಮ್ಮೆ ಕಾಡ್ಗಿಚ್ಚಿನಂತೆ ಉರಿದು, ನನ್ನ ನಂಬಿಕೆಯನ್ನೇ ಬಸ್ಮ ಮಾಡುವುದುಂಟು.ಎಂದಿನಂತೆ ನೀರಸ ಬದುಕು,ಇರುವುದನ್ನು ಬಿಟ್ಟು ಇರದುದರೆಡೆಗೆ ತುಡಿಯುವ ಮನ, ನನ್ನದಲ್ಲದ್ದು ನನ್ನದಾಗಬೇಕೆಂಬ ಸ್ವಾರ್ಥ, ಯೋಗ್ಯವಲ್ಲದ್ದನ್ನು ಪಡೆಯುವ ದುರಾಸೆ.ಯಾಕಿಷ್ಟು ಕ್ಲಿಷ್ಟಕರ ಜೀವನ?? ಯಾರ ಮೆಚ್ಚಿಸಲು!?ಅಂತರಂಗವೆಂಬ ಗುರುವಿಗೆ ಗುಲಾಮನಾಗಿ, ಅವನ ಮೆಚ್ಚುಗೆಯ ಜೀವನ ಅತೀ ವಿರಳ.ನನ್ನ ಮನಸ್ಸಿಚ್ಛೆಯಂತೆ ಬದುಕುತ್ತೇನೆ (My life,My rules)ಎಂದು ಅಂದವರೆಲ್ಲ, ಹಾಗೆ ಬದುಕುವುದಿಲ್ಲ. ಆದರೆ ಒಂದಂತು ಸತ್ಯ, ಕ್ರೂರ ಪ್ರಪಂಚ, ಘೋರ ವಿಧಿ ಮತ್ತು ನೀಚ ಜನರ ನಡುವೆ ಬದುಕು ಬೊಗಸೆಯಲ್ಲಿ ಹಿಡಿದು ನೀಡುತ್ತಿರುವ ಪ್ರೀತಿಗೆ ಋಣಿ ನಾನು.ಬದುಕಿನ ಪುಟ್ಟ ಪುಟ್ಟ ಸಂಭ್ರಮಗಳ ಆಚರಣೆ ಒಂದೆಡೆಯಾದರೆ, ಹೇಳದೆ ಉಳಿದಿಹ ನೂರು ಮಾತಿಗೆ ಮನಸ್ಸಿನ ಪಕ್ಷಿಯ ಆಕ್ರಂದನ ಮುಗಿಲು ಮುಟ್ಟುವುದು ಇನ್ನೊಂದೆಡೆ .ಇಷ್ಟೆಲ್ಲ ಬರೆಯೋ ಹೊತ್ತಿಗೆ, ಮನಸ್ಸು ಮತ್ತೆಲ್ಲಿಗೋ ಹಾರ್ತಿದೆ, ಸಾವಿರ ಸಾವಿರ ಹೊಸ ಆಲೋಚನೆಗಳು....ಮತ್ತೆ ಆ ಆಲೋಚನೆಗಳ ಹಿಂದೆ ಅಲೆದಾಡುವ ಮನಸ್ಸು.🎭   

Sunday, 22 April 2018

ಗೊಂದಲ



ಸಹಸ್ರ ಸಹಸ್ರ ಯಕ್ಷ ಪ್ರಶ್ನೆಗಳು,ಬಿಡದೆ ಕಾಡಿವೆ ಎದೆಯಲ್ಲಿ ಹೆಣಗಾಡಿದೆ ಮನಸ್ಸು ಒಂದೊಂದಕ್ಕೂ ಉತ್ತರ ಹುಡುಕುವಲ್ಲಿ ||
ಇಂದಿಲ್ಲ ನಾಳೆ ಎಲ್ಲಕ್ಕೂ ಉತ್ತರಿಸುವೆ ಎಂಬ ಖಚಿತದಲ್ಲಿ
ಇದೆಲ್ಲದರ ನಡುವೆ ನನ್ನೀ ಮನ ಎಂದೂ ಕೊನೆಗಾಣದ ಗೊಂದಲದಲ್ಲಿ||
                                         


                                                ~ಚಂದನ ಕಶ್ಯಪ್

Wednesday, 21 March 2018

ನೆನಪು



ನೆನಪು, ಮನಸ್ಸಿನಲ್ಲಿ ಪರಿಪರಿಯಾಗಿ ಹೆಣೆದ
ವ್ಯಕ್ತಿ, ವಸ್ತು ಮತ್ತು ಪ್ರಸಂಗಗಳ ಬಣ್ಣ ಬಣ್ಣದ ಬಿಂಬ.ಸುಮ್ಮನೆ ಕೂತಾಗೊಮ್ಮೆ, ಹಳೆಯದನ್ನೆಲ್ಲಾ ನೆನೆದರೆ ತುಟಿಯಂಚಿನಲ್ಲೊಂದು ನಗು ಅಥವಾ ಕಣ್ಣಂಚಿನ ಅಶ್ರು ಖಚಿತ.ನೆನಪುಗಳ ಬುತ್ತಿ ಬಿಚ್ಚುತ್ತಾ ಹೋದಂತೆ ಮನಸ್ಸಿಗೆ ಮತ್ತಷ್ಟು, ಮಗದಷ್ಟು ನೆನೆಯುವ ಆಸೆ, ಥೇಟ್ ಆಟಿಕೆ ಸಿಗದೆ ರಚ್ಚೆ ಹಿಡಿದ ಮಗುವಿನಂತೆ.ವಿಪರ್ಯಾಸವೆಂದರೆ ಕಾಲಗಳೆದಂತೆ, ನೆನಪುಗಳು ನಮ್ಮಿಂದ ಮಾಸುತ್ತಾ ಹೋಗುತ್ತದೆ.ಆದರೆ ಎಲ್ಲರ ಜೀವನದಲ್ಲೂ ಅಳಿಸಲಾಗದ ಒಂದಿಷ್ಟು ನೆನಪುಗಳು ಮನೆ ಮಾಡಿರುತ್ತವೆ.ಕೆಲವೊಂದು ವಸ್ತು-ವ್ಯಕ್ತಿಗಳು ನಮ್ಮೊಂದಿಗೆ ಭೌತಿಕವಾಗಿ ನೆಲೆಸಿರದಿದ್ದರು, ನಮ್ಮ ಮನದ ಮೂಲೆಯಲ್ಲೆಲ್ಲೋ ಶಾಶ್ವತವಾಗಿ ಟಿಕಾಣಿ ಹೂಡಿರುತ್ತಾರೆ.ನೀವು ಎಂದಾದರು ನಿಮ್ಮ ತುಟಿಯಂಚಿನಲ್ಲಿ ನಗು ಮೂಡಿಸಿದ, ನಿಮ್ಮ ಬೇಜಾರನ್ನು ಕ್ಷಣಾರ್ಧದಲ್ಲಿ ದೂರ ಮಾಡಿದ, ನಿಮ್ಮ ನೆನಪಿನಲ್ಲಿ ಜೀವಂತವಾಗಿರುವ ವ್ಯಕ್ತಿಗೆ, ಅಂತರಾಳದಿಂದೊಮ್ಮೆ ಮನಸಿನಲ್ಲೇ ಧನ್ಯವಾದ ಸಲ್ಲಿಸಿದ್ದೀರಾ....?????
Dedicated to all the people who are alive in my memories.......💓

/ಅಮ್ಮನ ಕೈ ಅಡುಗೆ ಎಂಬ ಅಮೃತವೂ..../ .

ಅದೇನೋ ಗೊತ್ತಿಲ್ಲ ಇತ್ತೀಚಿಗೆ, ಅಮ್ಮ ಒಂದೆರೆಡು ಹಸಿಮೆಣಸು ಮುರಿದು ಒಗ್ಗರಣೆ ಹಾಕಿ, ಒಂದಿಷ್ಟು ಕಾಯಿತುರಿ ಉಪ್ಪು ಹಾಕೊಟ್ರೆ, ತುಟಿಕ್ ಪಿಟಿಕ್ ಅನ್ದೆ ತಿಂದು ಮುಗ್ಸೋ ನ...